Friday, May 15, 2015

ನೆನಪು ಮರುಕಳಿಸಿದಾಗ !!


ಯಾಕೋ ಹೀಗೆ ಬರೆಯಬೇಕು ಅನ್ನಿಸಿತು .  ಹಿಂದೆಲ್ಲ ನಾವು ಚಿಕ್ಕವರಿದ್ದಾಗ ಫಲಿತಾಂಶದ ದಿನ ಬಂತೆಂದರೆ ಅದೇನು ಹಬ್ಬದಸಂಭ್ರಮ ಅಂತೀರಾ .  ಆಗ ಈಗಿನಂತೆ %, ಪ್ರಥಮ ರ್ಯಾಂಕಿಗೆ ಅಂತ ಮಹತ್ವ ಇದ್ದ ಮಟ್ಟಿಗೆ ನನಗೆ ತಿಳಿದಿಲ್ಲ.  ಒಟ್ಟು ಎಲ್ಲರೂ ಫಸ್ಟ್ ಕ್ಲಾಸಿನಲ್ಲಿ ಪಾಸಾಗುತ್ತಿದ್ದೆವು.  ನಮ್ಮ ಮನೆಯಲ್ಲಿ ಎಲ್ಲರಿಗೂ ೨-೩ ವರ್ಷದ ಅಂತರ.  ನಾನು ಕಡೆಯವಳು.  ಎಲ್ಲಾ ಅಣ್ಣಂದಿರು ಅಕ್ಕಂದಿರೆ ಇದ್ದದ್ದು.  ಉಡುಪಿ ಇಂದ ಅಪ್ಪ ಅಮ್ಮ ಬೆಂಗಳೂರಿಗೆ ಬಂದು ಇಲ್ಲೇ ಉದ್ಯೋಗ ಹಿಡಿದು ಅಪ್ಪ ನಮ್ಮನ್ನೆಲ್ಲ ರಾಜಾಜಿನಗರದ ಶಿವನಹಳ್ಳಿ ಯಲ್ಲಿ ಇರುವ ಒಂದು ಸರ್ಕಾರಿ ಶಾಲೆಯಲ್ಲಿ ಓದಿಸುತ್ತಿದ್ದರು.  ನಾವೆಲ್ಲರೂ ದೇವರ ದಯೆ ಇಂದ ಬುದ್ದಿವಂತರೇ ಅಗಿದ್ವಿ.  ಸೊ ಹಾಗಾಗಿ ಶಾಲೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಯಾವಾಗಲು ಪ್ರಥಮ ದರ್ಜೆ ಯಲ್ಲಿ ತೇರ್ಗಡೆ ಆಗುತ್ತಿದ್ದೆವು.  ಆಗ ಪುಸ್ತಕಗಳನ್ನು ಜೋಪಾನವಾಗಿ ಕಾಪಾಡಿಕೊಂಡು ಬರುತ್ತಿದ್ದೇವು.  ನನ್ನ ಅಕ್ಕ ದೊಡ್ಡವಳು ಅವಳ ನಂತರ ಆ ಪುಸ್ತಕಗಳು ನನ್ನ ದೊಡ್ಡ ಅಣ್ಣನಿಗೆ ಹೊಗುತ್ತಿದ್ದವು.  ಅವನು ಓದಿದ ನಂತರ ಅದನ್ನು ಜೋಪಾನವಾಗಿರಿಸಿ ನಂತರ ನನ್ನ ಎರಡನೇ ಅಕ್ಕನಿಗೆ ಅದೇ ಪುಸ್ತಕಗಳು ಅವಳ ನಂತರ ಅದೇ ಪುಸ್ತಕಗಳು ನನ್ನ ಎರಡನೇ ಅಣ್ಣನಿಗೆ  ಓದು ಮುಗಿಸಿದ ನಂತರ ನನ್ನ ಅಮ್ಮ ಮೂರು ವರುಷ ಅದನ್ನೇ ಜೋಪಾನವಾಗಿರಿಸಿ ಅದಕ್ಕೆ ನ್ಯೂಸ್ ಪೇಪರ್ ಶೀಟ್ಸ್ ನಿಂದ ಹೊದಿಕೆ ಹೊದಿಸಿ ನನಗೆ ಕೊಡುತ್ತಿದ್ದರು.  ನನ್ನ ನಂತರ ಅದನ್ನ ಅರ್ಧ ಬೆಲೆಗೆ ನಮ್ಮ ಜೂನಿಯರ್ಸ್ ಯಾರಿಗಾದರು ಪುಸ್ತಕ ಬೇಕಿದ್ರೆ ಅದನ್ನೇ ಕೊಟ್ಟು ಬಂದ ಹಣದಿಂದ ಪೆನ್ನೊ ಪೆನ್ಸಿಲ್ಲೋ ರಬ್ಬರೋ, ನೋಟ್ ಬುಕ್ಸ್ ಗಳನ್ನೊ ಕೊಳ್ಳುತ್ತಿದ್ದೇವು.  ಅಷ್ಟಕ್ಕೇ ನಿಲ್ಲಲಿಲ್ಲ ಇನ್ನೂ ಹೇಳ್ತೀನಿ ಕೇಳಿ ಎಲ್ಲರ ನೋಟ್ ಬುಕ್ಸ್ ನಿಂದ ಉಳಿದ ಹಾಳೆಗಳನ್ನು ಕಿತ್ತು ಅದರಿಂದ ೧೦೦ ಪೇಜ್ ಪುಸ್ತಕಗಳನ್ನು ಮಾಡಿ ನಮ್ಮ ಅಪ್ಪ ಹೊಲಿದು ಅದಕ್ಕೆ ನ್ಯೂಸ್ ಪೇಪರ್ ನಿಂದ ಹೊದಿಕೆ ಹೊದಿಸಿ ಹೊಸ ನೋಟ್ ಬುಕ್ಸ್ ಮಾಡಿ ಕೊಡುತ್ತಿದ್ದರು.  ನಮಗೋ ಖುಷಿಯೋ ಖುಷಿ ಅಪ್ಪ ಉಳಿದ ಹಾಳೆಗಳನ್ನು ಒಟ್ಟು ಮಾಡಲು ಹೇಳಿ ಜೋಡಿಸಿದಳು ನಮ್ಮ ಅಣ್ಣ ಅಕ್ಕಂದಿರಿಗೆ ಹೇಳುತ್ತಿದ್ದರು.  ಎಲ್ಲರ ಫಲಿತಾಂಶ ಬಂದ ದಿನ ಇದನ್ನೆಲ್ಲಾ ಒಟ್ಟು ಮಾಡಿ ರಫ್ ನೋಟ್ ಕಾಪಿ ನೋಟ್ ಬುಕ್ಸ್ ಮತ್ತೆ ಡಬಲ್ ಶೀಟ್ಸ್ ಮಧ್ಯದಲ್ಲಿ ಸಿಕ್ಕರೆ ಅದನ್ನು ಹಾಗೆ ಇಟ್ಟು ಕೊಂಡು ಟೆಸ್ಟ್ ಬರೆಯಲು ಆ ಡಬಲ್ ಶೀಟ್ಸ್ ಹಾಳೆಗಳನ್ನು ಉಪಯೋಗಿಸುತ್ತಿದ್ದೆವು.  ನಮ್ಮ ಅಮ್ಮ ಫಲಿತಾಂಶದ ದಿನ ಒಂದಷ್ಟು ಪಾಯಸ ಮಾಡುತ್ತಿದ್ದರು.  ನಮ್ಮ ತಂದೆಯವರು ಬಂದ ಕೂಡಲೇ ''ಏನೂಂದ್ರೆ  ನೋಡಿ ನಮ್ಮ ಮಕ್ಕಳೆಲ್ಲಾ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಯಾಗಿದ್ದಾರೆ ಶಾಲೆಯ ಮುಖ್ಯೋಪಾಧ್ಯರು ತುಂಬಾ ಮೆಚ್ಚುಗೆ ವ್ಯಕ್ತ ಪಡಿಸಿ ಹೊಗಳಿದರು.  ಇದಕ್ಕಿಂತ ಸಂತೋಷ ಬೇಕೇ ನಮಗೆ, ನೋಡಿ ಅದಕ್ಕೆಂದೇ ಇಂದು ಪಾಯಸ ಮಾಡಿದ್ದೇನೆ ಕುಡಿಯಿರಿ'' ಎಂದು ಅದೆಷ್ಟು ಖುಷಿ ಇಂದ ನಮ್ಮ ತಂದೆಗೆ ನಮಗೆಲ್ಲ ಪಾಯಸ ಕೊಟ್ಟು ನಂತರ ಪಾತ್ರೆಯ ತಳಕ್ಕೆ ಸ್ವಲ್ಪ ನೀರು ಬೆರೆಸಿ ಪಾತ್ರೆ ಆಡಿಸಿ ಅದನ್ನು ತಾನು ಕುಡಿಯುತ್ತಿದ್ದರು.  ಅದೆಂಥಾ ಮಹಾ ತಾಯಿ ನನ್ನಮ್ಮ ನಮ್ಮ ವಿದ್ಯಾಭ್ಯಾಸ ನಮ್ಮ ಏಳಿಗೆ ಕಂಡು ಹೊಟ್ಟೆ ತುಂಬಾ ಊಟ ಇರದಿದ್ದರೂ ೭ ಜನ ಮಕ್ಕಳನ್ನು ಒಳ್ಳೆಯ ವಿದ್ಯಾವಂತರಾಗಿ ಬುದ್ದಿವಂತರನ್ನಾಗಿ ಮಾಡಿ ಈ ದೇಶಕ್ಕೆ ಒಳ್ಳೆಯ ಪ್ರಜೆಗಳನ್ನಾಗಿ ಮಾಡಿ ತನ್ನ ಕರ್ತವ್ಯ ಪೂರ್ಣ ಮಾಡಿ ಅಪ್ಪ ಅಮ್ಮ ದೇವರ ಪಾದ ಸೇರಿದರು.  ಆಗಿನ ಕಾಲದಲ್ಲಿ ದುಡ್ಡು ಇರಲಿಲ್ಲ ಆದರೂ ಆಗ  ಸಿಕ್ಕುತ್ತಿದ್ದ ಪ್ರೀತಿ, ಕಾಳಜಿ, ಆ ಆತ್ಮ ಸ್ತೈರ್ಯ , ವಿದ್ಯೆಯಾ ಬಗ್ಗೆ ಇದ್ದಂಥ ಆ ಗೌರವ, ಈಗ ಎಲ್ಲೋ ಕಾಣೆಯಾಗುತ್ತಿದ್ದಂತೆ ಭಾಸವಾಗುತ್ತಿದೆ.  ನಾವು ಹತ್ತನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದಾಗ ನನಗೆ ಚೆನ್ನಾಗಿ ನೆನಪಿದೆ,  ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ನಮಗೆ ಒಂದು ಒಳ್ಳೆಯ ಶಾಯಿ ತುಂಬುವ ಪೆನ್ ಕೊಟ್ಟು ನಮ್ಮನು ಹರಸಿ ಸಿಹಿ ಕೊಟ್ಟು ಶಾಲೆ ಇಂದ ಬೀಳ್ಕೊಟ್ಟಿದ್ದು ನನಗೆ ಇನ್ನೂ ನನ್ನ ನೆನಪಿನ ಸಾಗರದಲ್ಲಿ ಹಾಗೆ ಉಳಿದು ಕೊಂಡಿದೆ.  ಆಮೇಲೆ ನನ್ನಮ್ಮ ಏನು ಮಾಡುತ್ತಿದ್ದರು ಅಂದರೆ , ನಮ್ಮನ್ನೆಲ್ಲ ಬೇಸಿಗೆ ರಜದಲ್ಲಿ ಕುಳ್ಳಿರಿಸಿ ಮುಂದಿನ ತರಗತಿಯ ಪುಸ್ತಕ ಕೊಟ್ಟುರಫ್ ನೋಟ್ ಪುಸ್ತಕದಲ್ಲಿ ಅದನ್ನೆಲ್ಲ ಪ್ರತಿ ದಿನ ಎರಡೆರಡು ಪುಟ ಬರೆಯುವಂತೆ ಹೇಳಿ ತಾನು ನಮ್ಮೊಂದಿಗೆ ಕುಳಿತು ನಮ್ಮ ಅಕ್ಷರಗಳನ್ನು ಮುತ್ತಿನಂತೆ ಬರೆಯುವಂತೆ ತೋರಿಸಿಕೊಟ್ಟವರೇ ನನ್ನಮ್ಮ.  ನಮ್ಮ ಮನೆಯಲ್ಲಿ ನನ್ನ ಅಣ್ಣಂದಿರಿಗೆ , ಅಕ್ಕಂದಿರಿಗೆ, ಹಾಗೂ ನನಗೂ ಸಹ ನಮ್ಮ ನೀಟ್ ಬುಕ್ , ಮತ್ತೆ ಎಲ್ಲ ನೋಟ್ಸ್ ನಲ್ಲಿ ಪ್ರತಿಯೊಂದು ಪಾಟಕ್ಕು 'ಬರವಣಿಗೆ ಅಂದವಾಗಿದೆ' ಎಂದು ಬರೆದು ಟೀಚರ್ಸ್ ಸಹಿ ಹಾಕುತ್ತಿದ್ದರು.  ಅದೆಷ್ಟು ಆನಂದ ನಮಗಾಗ ಅದನ್ನು ಶಾಲೆ ಇಂದ ಓಡಿ  ಬಂದು ಅಮ್ಮನಿಗೆ ನಮ್ಮ ಪುಸ್ತಕ ತೆರೆದು ತೊರಿಸುತ್ತಿದೆವು.  ಅಮ್ಮನ ಕಂಗಳಲ್ಲಿ ಅದೆಂತಹ ಆನಂದ ಅಂದರೆ ವರ್ಣಿಸಲಸಾಧ್ಯ !!!!

2 comments:

  1. ಈಗ ಬಿಡಿ ಶಾಲೆಗಳವರೇ ಮಕ್ಕಳ ಪುಸ್ತಕ, ಸಮವಸ್ತ್ರ ಮತ್ತು ಇನ್ನಿತರೆ ಕೊಟ್ಟು ಬಿಡುತ್ತವೆ. ಹಳೆಯ ಸಾಮಗ್ರಿಗಳಿಗೆ ಈಗಿಲ್ಲ ನೆನಪು ಮತ್ತು ಪುನರ್ ಬಳಕೆ.

    ReplyDelete
  2. ಪುಸ್ತಕಗಳ ಪುನರ್ ಬಳಕೆ illave illa

    ReplyDelete