Thursday, December 25, 2014

ಚಂಚಲ ಮನಸ್ಸು






ಚಂಚಲ ಮನಸ್ಸು


ಸಮುದ್ರದಲ್ಲಿರುವ ನೀರು ಒಳ ನುಗ್ಗಿದರೆ ಮಾತ್ರ ಹಡಗು ಮುಳುಗುತ್ತದೆ. ಆಂತಯೇ ದುರಾಲೋಚನೆಗಳು ಕೂಡಾ ಮನಸ್ಸಿಗೆ ಲಗ್ಗೆ ಇಟ್ಟರೆ ಅನಾಹುತಗಳು ಖಚಿತ .  ಆದುದರಿಂದ ಇಂದ್ರಿಯಗಳ ನಿಗ್ರಹಣೆ  ಮಾಡುವಿದು ಒಳಿತು.
ಮನಸ್ಸು ಮರ್ಕಟ ನಂತೆ , ಅಲ್ಲೋಲಕಲ್ಲೋಲ ಆಗುವುದು ಬೇಗ; ಚಂಚಲ ಮನಸ್ಸಿಗೆ ಸ್ವತಂತ್ರವಾಗಿ ನಿರ್ಧರಿಸುವುದು ಬಹಳ ಸರಾಗಯಾರ ನಿರ್ದೇಶನ ಬೇಡ, ಯಾರ ಉಪದೇಶವೂ ಬೇಡ.  ಮನಸ್ಸು ಅದೆಷ್ಟು ಚಂಚಲ ಎಂದರೆ ಮನಸ್ಸಿನ ನಿಗ್ರಹದಲ್ಲಿ ಧೃಡತೆ ಇಲ್ಲವಾದಲ್ಲಿ ಮನಸ್ಸಿನಲ್ಲಿ ಕ್ಷೋಭೆ ಉಂಟಾಗಿ ಅದು ಬಿರುಗಾಳಿ ಯಷ್ಟೇ ಬಿರುಸಾಗಿ ಬಿಟ್ಟರೆ ಅದನ್ನು ತಹಬಂದಿಗೆ ತರುವುದು ಗಾಳಿಯನ್ನು ಹಿಡಿದಿಡುವಷ್ಟೇ ಆಸಾಧ್ಯ.  ಮನಸ್ಸು  ಧುಮ್ಮಿಕ್ಕುವ ಜಲಪಾತದೋಪಾದಿಯಂತೆ ' ಎಷ್ಟು  ಪ್ರಶಾಂತವಾಗಿ ಕಣ್ಮನ ತುಂಬುತ್ತದೆಯೋ ; ಅದೇ ಸುಂದರ ಮನಸ್ಸು ಬತ್ತಿ ಹೋದ ಜಲಪಾತದಂತೆ  ಅಷ್ಟೇ ಪ್ರಕ್ಶುಬ್ದಮಾನವಾಗಿ ಕಲುಷಿತವಾಗುತ್ತದೆ ಕೂಡ.  ಮನಸ್ಸೆಂಬ  ಪಂಜರದಲ್ಲಿ ಪ್ರೀತಿ ಬಂದಾಗ ಅದು ಸುಂದರವಾದ ಭಾವನಾ ಲೋಕದಲ್ಲಿ ವಿಹರಿಸಿ , ಸುಂದರ ಕನಸ್ಸುಗಳ ಕೋಟೆಯನ್ನೇ ನಿರ್ಮಿಸಿ ಅದರಲ್ಲಿ ವಿಹರಿಸುತ್ತಿರುತ್ತದೆ ; ಅದೇ ಮನಸ್ಸೆಂಬ  ಪಂಜರದಲ್ಲಿ ಕ್ರೋಧ, ದ್ವೇಷ ಉಂಟಾದಾಗ  ಆ ಸುಂದರ ಮನಸ್ಸು ವಿಷಪೂರಿತಗೊಂದು ವಿಕಾರಗೊಳುತ್ತದೆ .  ಮನಸ್ಸಿನಿಂದ ಇಂದ್ರಿಯಗಳ ನಿಗ್ರಹ ಸಾಧ್ಯ ಇದೆ.  ಮನಸ್ಸು ಹತೋಟಿ ಯಲ್ಲಿದ್ದರೆ ಅಸಾಧ್ಯವಾದುದನ್ನು ಸಹಾ ಸಾಧ್ಯ  ಮಾಡುವ ಶಕ್ತಿ ಅದಕ್ಕಿದೆ.  ಮನಸ್ಸನು ಭಾವನಾತ್ಮಕವಾಗಿ ಸಂತೈಸ ಬೇಕು   ಭಾವನೆಗಳೇ ಅಲ್ಲವೇ ಮನಸ್ಸಿಗೆ ಮುದ ನೀಡುವುದು . ಒಳ್ಳೆ ಯ ಮನಸ್ಸಿನಿಂದ ದಿಟ್ಟ ಗುರಿಯೊಂದಿಗೆ ಮುನ್ನಡೆಯಿರಿ. ಗೆಲುವು ನಿಮ್ಮದಾಗುತ್ತದೆ.  


Tuesday, December 16, 2014

<< ಸಾತ್ವಿಕ ಆಹಾರ >>





ಆಹಾರ 

ಆಹಾರ  ಸೇವನೆ ನಮ್ಮ ದೇಹಕ್ಕೆಗೆ ಮಾತ್ರ ಎಂದು ನಾವು ತಿಳಿದಿದ್ದೇವೆ. ಆದರೆ ದೇಹಧಾರಣೆಗಾಗಿ ನಾವು ಸೇವಿಸುವ ಆಹಾರ ನಮ್ಮ  ಗುಣ ಪರಿವರ್ತನೆಯನ್ನೂ ಮಾಡುತ್ತದೆ. ಈ ಸೃಷ್ಟಿಯಲ್ಲಿ ಇರುವುದು ಮೂರು ಗುಣಗಳು. 'ಸಾತ್ವಿಕ' , 'ರಾಜಸ'  ಹಾಗೂ  'ತಾಮಸ'. ಮನುಷ್ಯರನ್ನು ಸೇರಿ ಎಲ್ಲಾ ಪ್ರಾಣಿಗಳಲ್ಲೂ ಈ ಮೂರು ಗುಣಗಳು ಬೇರೆ ಬೇರೆ ಪ್ರಮಾಣಗಳಲ್ಲಿ ಇರುತ್ತದೆ. ಯಾವ ಗುಣದ ಪ್ರಮಾಣ ಯಾರಲ್ಲಿ ಅಧಿಕವಾಗಿರುತ್ತದೋ,  ಅವರ ಕಾರ್ಯ ಕೆಲಸಗಳು ಹಾಗಿರುತ್ತವೆ.  ನಮ್ಮ ಎಲ್ಲಾ ಕೆಲಸ ಕಾರ್ಯಗಳೂ ನಮ್ಮ ಮನಸ್ಸು ಬುಧ್ಧಿಯ ಮೇಲೆ ಅವಲಂಬಿಸಿರುತ್ತದೆ. ಮನಸ್ಸು ಬುಧ್ಧಿಗಳು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಜೀವ ರಸಗಳನ್ನು ಅವಲಂಬಿಸಿರುತ್ತದೆ. ಈ ರಸಗಳ ಉತ್ಪತ್ತಿಯು ನಾವು ಸೇವಿಸುವ ಆಹಾರವನ್ನು ಅವಲಂಬಿಸಿರುತ್ತದೆ. ಹಾಗಾಗಿ ನೇರವಾಗಿ ನಮ್ಮ ಕೆಲಸ, ಸ್ವಭಾವ ಮತ್ತು ಗುಣ ನಾವು ಸೇವಿಸುವ ಆಹಾರದ  ಮೇಲೆ ಅವಲಂಬಿಸಿರುತ್ತದೆ.

ಮೇಲೆ ಹೇಳಿದ ಮೂರು ಗುಣಗಳು ಈ ರೀತಿಯಾಗಿ ಇರುತ್ತವೆ :

೧)  ಶಾಂತತೆ , ಕಾರುಣ್ಯ , ದಯೆ , ಪ್ರೇಮ, ಪೀತಿ,  ಸಹನೆ, ಸಹಿಷ್ಣುತೆ, ಸಭ್ಯತೆ, ಭಕ್ತಿ, ಮುಂತಾದ ಎಲ್ಲ ಗುಣಗಳೂ ಸಾತ್ವಿಕ ಗುಣದ ಪರಿಧಿಯಲ್ಲಿ ನಿಲ್ಲುತ್ತವೆ.

೨)  ವೇಗ, ಸಿಟ್ಟು, ಆತುರ,  ಕ್ರೋದ, ಅಸಹನೆ, ಹಠ, ಮೋಹ, ಮುಂತಾದ ಗುಣಗಳು 'ರಾಜಸ' ಗುಣದ ಪ್ರತೀಕವಾಗಿರುತ್ತದೆ.

೩)  ಆಲಸ್ಯ, ನಿದ್ದೆ, ಕ್ರಿಯಾಹೀನತೆ, ಕೊಳಕುತನ, ಕಳ್ಳಬುಧ್ಧಿ, ಅಸಭ್ಯತೆ,  ನಡತೆಯಲ್ಲಿ ಹೊಲಸುತನ ಮುಂತಾದವು ತಾಮಸಿಕ ಗುಣವನ್ನು ಸೂಚಿಸುತ್ತದೆ.

ಬನ್ನಿ ಸ್ನೇಹಿತರೆ ನಾವೆಲ್ಲರೂ ಸಾತ್ವಿಕ ಆಹಾರ ಸೇವಿಸಿ ಸಾತ್ವಿಕ ಗುಣವನ್ನು ನಮ್ಮದಾಗಿಸಿಕೊಳ್ಳೋಣ

Monday, December 15, 2014

ನಾನೊಂದು ಕನಸ ಕಂಡೆ !





ನಿನ್ನೆ ರಾತ್ರಿ ಭಯಂಕರವಾದ ಕನಸೊಂದು ಕಂಡೆ ಸ್ನೇಹಿತರೆ. 'ಕನ್ನಡ ಬ್ಲಾಗ್' ನ ಸಹೃದಯರು ಒಂದು ಆಮಂತ್ರಣ ನೀಡಿದ್ದರು. ನಾನು ಕೂಡ ಖುಷಿ ಇಂದ ಕುಣಿದಾಡಿದೆ. ವಿಶೇಷ ಏನಪ್ಪಾ ಅಂದರೆ 'ಕನ್ನಡ ಬ್ಲಾಗ್' ನ ಎಲ್ಲ ಸದಸ್ಯರು ಒಂದೇ ಸೂರಿನಡಿ ಸೇರಿ 'ಕವಿತಾ ವಾಚನ' ಹಾಗೂ ಸ್ರಜನಶೀಲ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ವಾದವನ್ನು ಮಂಡಿಸಬಹುದು ಎಂಬುದಾಗಿತ್ತು. ನನಗೆ ಈ ರೀತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಬಹಳಾ ಖುಷಿ ಕೊಡುವ ವಿಚಾರ. ಸರಿ ಹೊರಡುವ ದಿನ ಅಂದರೆ ಕಾರ್ಯಕ್ರಮ ನಡೆಯುವ ದಿನ ಬಂತು. ನಾನು ನನಗೆ ಪ್ರಿಯವಾದ ಕೆಂಪು ಬಣ್ಣದ ಸೀರೆಯುಟ್ಟು, ಅದಕ್ಕೆ ಒಪ್ಪುವ ಬಳೆಗಳನ್ನು ತೊಟ್ಟು, ಹೂ ಮುಡಿದು ಹೊರಡಲು ರೆಡಿ ಆದೆ. ಇನ್ನೇನು ಬಸ್ ಸ್ಟಾಪ್ ಸಮೀಪಿಸುತ್ತಿದಂತೆ ಒಂದು ದೊಡ್ಡ ಕೊಂಬಿನ ಹೊರಿಯೊಂದು ನನ್ನನೇ ದೃಷ್ಟಿಸಿ ನೋಡುತ್ತಾ ಓಡಿಸಿಕೊಂಡು ಬಂತು. ನಾನು ಹೆದರಿ ಓಡಿದೆ, ಯಾಕೆಂದರೆ ಸ್ನೇಹಿತರೆ ನಿಮಗೆಲ್ಲ ತಿಳಿದಂತೆ ಹೋರಿಗಳಿಗೆ ಕೆಂಪು ಬಣ್ಣ ಕಂಡರೆ ಅಟ್ಟಿಸಿಕೊಂಡು ಓಡಿ ಬಂದು ಕೊಂಬಿಂದ ತಿವಿದು ಹಾಕುತ್ತದೆ ಎಂದು ನಮ್ಮಜ್ಜಿ ಕೂಡ ಆಗಾಗ ಹೇಳುತ್ತಿದ್ದರು. ಅದು ಅಲ್ಲದೆ ಡಾ ರಾಜ್ ಅಭಿನಯದ 'ಬಂಗಾರದ ಮನುಷ್ಯ' ಚಿತ್ರದ ಭಾರತಿ ಅವರ ಚಿತ್ರ ನನ್ನೆದುರು ಬಂತು. ಓಡಿ ಓಡಿ ಅಂತು ಇಂತೂ ಪಾರಾದೆ. ನನ್ನ ಪುಣ್ಯಕ್ಕೆ ಬಸ್ ಕೂಡ ಸಿಕ್ಕಿತು. ನಿರ್ವಾಹಕರು ಎಲ್ಲಿಗಮ್ಮ ಎಂದು ಕೇಳಿದ್ದು ಎರಡನೇ ಅಪಶಕುನ ನನಗೇಕೋ ಸ್ವಲ್ಪ ಹೊತ್ತು ಮನೆಗೆ ಹೋಗಿ ೫ ನಿಮಿಷ ಕಳೆದು ಮತ್ತೆ ಹೊರಡೋಣ ಯಾಕೋ ಶಕುನ ಸರಿ ಇಲ್ಲ ಅನ್ನಿಸಿತು. ಆದರೆ ಅ ಭಯಾನಕ ಹೋರಿಯ ಚಿತ್ರಣ ಕಣ್ಮುಂದೆ ಬಂದು ಬೇಡಪ್ಪ ಎಂದು ಹೆದರಿಕೊಂಡೇ ಬಸ್ ಪ್ರಯಾಣ ಮುಂದುವರಿಸಿದೆ. ಮುಂದಿನ ನಿಲ್ದಾಣ ಸೇರುವ ಮೊದಲೇ ಯಾರೋ ಒಬ್ಬ ವಾಹನ ಸವಾರ ಅಡ್ಡ ದಿಡ್ಡಿ ಬಂದು ನಮ್ಮ ಬಸ್ಗೆ ಹೊಡೆದ ಅವನು ಕೆಳಗೆ ಬಿದ್ದ ಪುಣ್ಯಕ್ಕೆ ಏನೂ ಅನಾಹುತ ಸಂಭವಿಸಲಿಲ್ಲ. ದೇವ್ರೇ! ದೇವ್ರೇ! ಸುರಕ್ಷಿತವಾಗಿ ಹೋಗುವಂತೆ ಮಾಡಪ್ಪ ಎಂದು ಮನಸಿನಲ್ಲಿ ಪ್ರಾರ್ಥಿಸುತ್ತ ಶ್ರೀ ಕನಕದಾಸರ ವಿರಚಿತ 'ಕೇಶವ ನಾಮ' ಮನಸಿನಲ್ಲಿ ಹೇಳಿ ಕೊಳ್ಳುತ್ತಾ ಕಣ್ಮುಚ್ಚಿ ಕುಳಿತ್ತಿದ್ದೆ. ಸ್ನೇಹಿತರೆ ಒಂದು ಕ್ಷಣದಲ್ಲಿ ಅದೇನಾಯಿತೋ ನನಗರಿವಿಲ್ಲ ನಾನು ಮತ್ತು ನನ್ನ ಸಹ ಪ್ರಯಾಣಿಕರು ಅದ್ಯಾವುದೋ ಆಸ್ಪತ್ರೆಯಲ್ಲಿ ಹಾಸಿಗೆ ಮೇಲೆ ಮಲಗಿದ್ದೇವೆ. ನನಗೆ ಹಾಸಿಗೆ ಇಂದ ಏಳಲು ಪ್ರಯತ್ನಿಸಿದರೆ ಕಾಲಲ್ಲಿ ಶಕ್ತಿಯೇ ಉಡುಗಿ ಹೋಗಿದೆ , ನನ್ನ ಪಕ್ಕದ ಬೆಡ್ ನವರು ಹೇಳುತ್ತಿದ್ದರು 'ಪಾಪ ನೋಡಿ ಈಕೆಗೆ ಕಾಲೇ ಹೋಗಿದೆಯಂತೆ ' ಅಯ್ಯೋ ದುರ್ದೈವವೇ ಇದೇನಾಯಿತು ನನ್ನನು ಯಾಕೆ ಈ ರೀತಿ ಪರೀಕ್ಷಿಸುತ್ತಿರುವೆ ಶ್ರೀ ಕೃಷ್ಣ ಎಂದು ಕೂಗಿ ಕೊಂಡೆ. ಮತ್ತೆ ಎದ್ದು ಕಣ್ಣು ಬಿಟ್ಟು ನೋಡುತ್ತೇನೆ ನಾನು ನಮ್ಮ ಮನೆಯಲ್ಲೇ, ನನ್ನ ಹಾಸಿಗೆಯಲ್ಲೇ ಇದ್ದೇನೆ. ಅಬ್ಬ ಯಾಕಿಂತ ದುಸ್ಸ್ವಪ್ನ ತಿಳಿಯಲಿಲ್ಲ. ಆದರೆ ನನಗೆ ಅನ್ನಿಸಿದ್ದು ಕೈ, ಕಾಲು ಕಳೆದು ಕೊಂಡು ಬದುಕಿ ಎಲ್ಲರಿಗೂ ಹೊರೆಯಾಗುವುದಕ್ಕಿಂತ ಜೀವ ಹೋದರೆ ಲೇಸು ಅಲ್ಲವೇ ಸ್ನೇಹಿತರೆ;  ಕೊನೆಯವರೆಗೂ ಯಾರಿಗೂ ಹೊರೆಯಾಗಬಾರದು , ನಮ್ಮಿಂದಾದ ಸೇವೆಯನ್ನು ದೀನ ದಲಿತರಿಗೆ ಮಾಡ ಬೇಕು , ಹಿರಿಯರಿಗೆ, ವೃದ್ದರಿಗೆ ನಮ್ಮ ಸೇವೆಯ ಅವಶ್ಯಕತೆ ಇದೆ.  ಆದರೂ ನಾವು ವಯಸ್ಸಾದಾಗ ನಮಗೆ ಬಂದದ್ದನ್ನು ಸ್ವೀಕರಿಸೋಣ.ಏನಂತೀರಿ? ಎಲ್ಲಾ ಶ್ರೀಹರಿಯ ಇಚ್ಛೆ. 

ತ್ಯಾಗಮಯಿ ತಾಯಿ







ತಾಯಿ ಮಮತೆ ಸಮುದ್ರದಷ್ಟು. ಅದು ಎಂದಿಗೂ ಬತ್ತದು. ಬಾಲ್ಯದಲ್ಲಿ ಕೇಳಿದ ಒಂದು ಪುಟ್ಟ ಕಥೆ... ಹೆತ್ತ ಕರುಳಿನ ದೊಡ್ಡತನವನ್ನು ಹೀಗೆ ಬಿಂಬಿಸುತ್ತದೆ: ಒಮ್ಮೆ ದುಷ್ಟನಾದ ಮಗನೊಬ್ಬ, ತನ್ನ ಪ್ರೇಯಸಿಯ ಆಸೆ ಈಡೇರಿಸಲು, ತನ್ನ ತಾಯಿಯನ್ನೇ ಕೊಂದು, ಆಕೆಯ ಹೃದಯವನ್ನು ಪ್ರಿಯತಮೆಗೆ ತೋರಿಸಲು ಅವಸರವಸರವಾಗಿ ಓಡುತ್...ತಿರುತ್ತಾನೆ. ರಸ್ತೆಯಲ್ಲಿ ಕಲ್ಲು ಎಡವಿ ಆ ದುಷ್ಟ ಮಗ ಮುಗ್ಗರಿಸುತ್ತಾನೆ. ಆಗ ತಾಯಿ ಹೃದಯ ಕೇಳುತ್ತದಂತೆ, ಮಗು ನಿನಗೆ ನೋವಾಗಲಿಲ್ಲ ತಾನೆ? ತಾಯಿಯ ಹೃದಯವೇ ಅಂತಹದ್ದು. ತನಗೆ ನೋವಾದರೂ ಸರಿಯೇ, ತನ್ನ ಮಕ್ಕಳು ಸಂತೋಷದಿಂದ ಇರಬೇಕು ಎಂದು ಬಯಸುವ ಸಹೃದಯಿ. ಹತ್ತಾರು ಕಷ್ಟ, ಕಾರ್ಪಣ್ಯಗಳನ್ನು ಸಹಿಸುವ ತಾಯಿ, ತನ್ನ ಕರುಳಿನ ಕುಡಿಗೆ ಕೊಂಚ ನೋವಾದರೂ ಸಹಿಸಳು. ಸಾವಿರಾರು ಮೈಲಿಯ ದೂರದಲ್ಲಿರುವ ತನ್ನ ಕಂದನಿಗೆ ಕೊಂಚ ನೋವಾದರೂ, ಆಕೆಯ ಹೃದಯ ಮಿಡಿಯುತ್ತದೆ. ಆಕೆಯ ಆರನೇ ಇಂದ್ರಿಯ (ಸಿಕ್ಸ್ತ್‌ ಸೆನ್ಸ್‌ ) ತುಡಿಯುತ್ತದೆ. ಎಲ್ಲಾದರೂ ಇರಲಿ ತನ್ನ ಮಕ್ಕಳು ಚೆನ್ನಾಗಿರಲಿ ಎಂದು ತಾಯಿ ಸದಾ ದೇವರನ್ನು ಪ್ರಾರ್ಥಿಸುತ್ತಾಳೆ. ಈ ತಾಯಿ ಮಮತೆ - ಮಮಕಾರವನ್ನು ವರ್ಣಿಸಲು ಪದಗಳೇ ಇಲ್ಲ. ಇದಕ್ಕೆ, ದೇಶ - ಭಾಷೆಯ ಎಲ್ಲೆಯಿಲ್ಲ.  ತಾಯಿಗೆ ತಾಯಿಯೇ ಸಾಟಿ .  ದೇವರು  ತಾನು ಕಡೆಯಲ್ಲೂ ಇರಲಾಗದು  ಎಂದು ತಾಯಿಯನ್ನು  ಸೃಸ್ತಿಸಿದನಂತೆ .    

ಸುಳ್ಳು ಸುಳ್ಳು ಸುಳ್ಳು ಹಸಿ ಹಸಿ ಸುಳ್ಳು




ಜೀವನದಲ್ಲಿ ಕೆಲವೊಮ್ಮೆ ಸುಳ್ಳು ಹೇಳದೆ ವಿಧಿ ಇಲ್ಲ ಅಂತಹ ಪರಿಸ್ತಿತಿ ಉದ್ಭವ ಆಗುತ್ತೆ  ; ಕಹಿಯಾದ ಸತ್ಯ ಹೇಳುವುದಕ್ಕಿಂತ , ಸಿಹಿ ಯಾದ ಸುಳ್ಳು ಬಹಳ ಹಿತವಾಗಿರುತ್ತೆಯಾರಿಗೂ ಅದರಿಂದ ತೊಂದರೆಯಾಗಲಿ, ಅನಾನುಕೂಲವಾಗಲಿ ಆಗುವುದಿಲ್ಲ.  'ಸತ್ಯಂ ಬ್ರೂಯಾದ್, ಪ್ರಿಯಂ ಬ್ರೂಯಾದ್, ನ ಬ್ರೂಯಾದ್ ಸತ್ಯಂ ಅಪ್ರಿಯಂ' ಅಲ್ಲವೇ ? ಹಾಗಾಗಿ ಕೆಲವೊಮ್ಮೆ ಸತ್ಯ ಹೇಳೋದ್ರಿಂದ ತುಂಬಾ ಅನಾಹುತಗಳು, ಕಹಿ ಘಟನೆಗಳು, ಸಂಬಂಧ ಒಡೆದುಹೋಗುವಂತ ಘಟನೆಗಳು ನಡೆಯುತ್ತವೆ.  ಇಂತಹ ಪ್ರಸಂಗಗಳು ದಿನ ನಿತ್ಯ ಎಲ್ಲರ ಜೀವನದಲ್ಲೂ ನಡೆಯುತ್ತವೆ.  ವೈದ್ಯರು ಕೆಲವೊಮ್ಮೆ, ರೋಗಿಗಳು ಜೀವಂತವಾಗಿರಲು ಅವರ ಆಯಸ್ಸುಕೆಲವೇ ತಿಂಗಳು ಅಥವಾ ಕೆಲವೇ ದಿನಗಳೇ ಆಗಲಿ ಇರುವಾಗ ವೈದ್ಯರು ಅಂತಹ ಸಂಧರ್ಭಗಳಲ್ಲಿ ಸುಳ್ಳು ಹೇಳಲೇ ಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ ಹಾಗೂ  ಅನಿವಾರ್ಯವಾಗಬಹುದು. ರೋಗಿಯ ಬಂಧುಗಳಿಗೆ ನಿಜ ಹೇಳಲೇ ಬೇಕಾಗುತ್ತದೆ. ಆದರೆ ರೋಗಿಯ ಹತ್ತಿರ ಇಂತಹ ಕಹಿ ಸುಳ್ಳನ್ನು ಹೇಳಿ ಅವನ ಉಳಿದಿರುವ ಕೆಲವು ದಿವಸಗಳನ್ನು ಜೀವಂತ ನರಕ ಮಾಡುವುದು ಸರಿಯೇ?  ಅವನಿಗೆ ನಿಜಾಂಶ ತಿಳಿಸದೆ ಹೋದರೆ ಅವನು ಇನ್ನು ಸ್ವಲ್ಪ ಹೆಚ್ಚು ದಿನ ಬದುಕುಳಿಯಬಹುದು ಅಥವಾ ಅವನ ಅರೋಗ್ಯ ಸುಧಾರಿಸಿ ಚೇತರಿಸಿ ಕೊಳ್ಳಲೂ ಬಹುದು ! ರೋಗಿಯು ಬದುಕಿರುವನಕ ಅವನನ್ನು ಖುಷಿಯಾಗಿ ಇಟ್ಟು ಕೊಳ್ಳುವುದೇ ವೈದ್ಯರ ಧ್ಯೇಯ ಕೂಡ.  ಸಿಹಿ ಸುಳ್ಳು ನಿಜ ಗೊತ್ತಾದಾಗ ಕಹಿ ಆಗುತ್ತದೆ ..ಮಗ ಫಸ್ಟ್ ಕ್ಲಾಸ್ ಅಂತ ತಂದೆ ತಾಯಿ ಖುಶಿಪಟ್ಟಿರುತ್ತಾರೆ .ನಿಜ ಗೊತ್ತಾದಾಗ ತುಂಬಾ ದುಃಖ ವಾಗುತ್ತದೆ .ಸಂಕಷ್ಟದಲ್ಲಿರುವವರನ್ನು ಪಾರು ಮಾಡಲು ಸುಳ್ಳು ಹೇಳಿದರೆ ಅದು ಒಳ್ಳೆಯ ಕೆಲಸಕ್ಕಾಗಿ .ಸಾವಿರ ಸುಳ್ಳು ಹೇಳಿ ಮದುವೆ ಮಾಡುವುದು ತೊಂದರೆಯೇ ..ವಾಸ್ತವ ಗೊತ್ತಾದಾಗ ಆಗುವ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚು .ಸುಳ್ಳು ಒಂದು ಆಯುಧವಾದರೆ ಅದನ್ನು ನಮ್ಮ ,ಬೇರೆಯವರ ರಕ್ಷಣೆಗೆ ಬೇಕಾದರೂ ಉಪಯೋಗಿಸಬಹುದು ,ಇಲ್ಲವೇ ತೊಂದರೆ ಕೊಡಲು ,ಹಿಂಸೆ ಮಾಡಲೂ ಉಪಯೋಗಿಸಬಹುದು  ನೋಡಿ ಇದು ' ಒಳ್ಳೆ ಸುಳ್ಳು'  ಅಲ್ಲವೇ ಸ್ನೇಹಿತರೆ ??  ಹಾಗಾಗಿ ನಾನು ಈ ನಿರ್ಧಾರಕ್ಕೆ ಬಂದೆ ''ಕಹಿಯಾದ ಸತ್ಯ ಹೇಳುವುದಕ್ಕಿಂತ , ಸಿಹಿ ಯಾದ ಸುಳ್ಳು ಹೇಳುವುದೇ ಲೇಸು'' ಹಾಗೆ ಯೋಚಿಸುತ್ತ ಈ ಲೇಖನ ಬರೆಯಲು ಸ್ಪೂರ್ತಿ ಬಂತು !!

ಸುಳ್ಳು ಗಳಲ್ಲಿ ಹಲವು ವಿಧ.  ೧) ಶುದ್ದ ಸುಳ್ಳು ೨) ಸಿಹಿ ಸುಳ್ಳು ೩) ಕಹಿ ಸುಳ್ಳು ೪) ಸ0ಕಷ್ಟದಿಂದ ಪಾರು ಮಾಡೋ ಸುಳ್ಳು ೫) ಸಹಾಯ ಮಾಡಲು ಸೃಷ್ಟಿಸುವ ಸುಳ್ಳು ೬) ಸಾವಿರ ಸುಳ್ಳು ಹೇಳಿ 'ಮದುವೆ'  ಮಾಡೋ ಸುಳ್ಳು
೭) ಹುಟ್ಟು ಸುಳ್ಳು ಇತ್ಯಾದಿ ಇತ್ಯಾದಿ ......

೧)  ಶುದ್ದ ಸುಳ್ಳು  ಅಂದ್ರೆ ಅದರಲ್ಲಿ ಒಂದಿಷ್ಟೂ ಸತ್ಯಾಂಶ ಇರುವುದಿಲ್ಲ ; ಅದು 'ಶುದ್ದ ಸುಳ್ಳು'
೨)  ಸಿಹಿ ಸುಳ್ಳು  ಅಂದ್ರೆ ಕೆಲವೊಮ್ಮೆ ನ ಪಾಸಾದ ವಿಧ್ಯಾರ್ಥಿ 'ನಾನು ಫಸ್ಟ್ ಕ್ಲಾಸ್ನಲ್ಲಿ ಪಾಸಾದೆ' ಅಂತ ತನ್ನ ಪೋಷಕರಿಗೆ ಹೇಳಿದಾಗ ಅವರಿಗಾಗುವ ಆನಂದ ಹೇಳತೀರದು ಅಲ್ವೇ ?
೩)  ಕಹಿ ಸುಳ್ಳು  ಅಂದ್ರೆ ನಿಮ್ಮ ಅಜ್ಜಿಗೆ ಸೀರಿಯಸ್ ಅಂತ ಮೆಸೇಜ್ ಕೊಡ್ತಾರೆ , ಆದ್ರೆ ಅಜ್ಜಿ ಶಿವ ಪಾದ ಸೇರಿ ಕೊಂಡು ಗಂಟೆಗಳೇ ಕಳೆದಿರುತ್ತೆ; ಯಾಕೆಂದ್ರೆ ಸಾವಿನ ಸುದ್ದಿ ಇನ್ನೂ ಕಹಿಯಾಗಿರುತ್ತೆ, ಜೀರ್ಣಿಸಿಕೊಳ್ಳಲು ಕಷ್ಟ ಅಲ್ವೇ ?
೪) ಯಾರನ್ನೇ ಅಗಲಿ ಅವರನ್ನು ಸಂಕಷ್ಟ ದಿಂದ ಪಾರು ಮಾಡಲು ಒಂದು ಸುಳ್ಳು ಹೇಳಿದರೆ ಅಡ್ಡಿ ಇಲ್ಲ ಅಲ್ವೇ ? ಒಮ್ಮೆ ಸನ್ಯಾಸಿ ಯೊಬ್ಬ ಧ್ಯಾನದಲ್ಲಿರುವಾಗ ಒಬ್ಬ ಬಡಪಾಯಿ ಪ್ರಾಣ ಭೀತಿ ಇಂದ ಬಂದು ಅವನಲ್ಲಿ ಆಶ್ರಯ ಪಡೆಯುತ್ತಾನೆ , ಆಗ ಒಬ್ಬ ಅವನನ್ನು ಕೊಲ್ಲಲು ಹುಡುಕಿಕೊಂಡು ಬಂದಾಗ ಅವನು ನಮ್ಮ ಆಶ್ರಮದಲ್ಲಿ ಇಲ್ಲ ಎಂದು ಆ ಸನ್ಯಾಸಿ ಸುಳ್ಳು ಹೇಳಿ ಅವನ ಪ್ರಾಣ ಕಾಪಾಡುತ್ತಾನೆ!
೫) ಅದೇ ರೀತಿ ಯಾರಿಗಾದರೂ ಸಹಾಯ ಮಾಡ ಬೇಕಾದಾಗ ಒಂದು ಸುಳ್ಳು ಸೃಷ್ಟಿಸಿ ಅವರಿಗೆ ಸಹಾಯ ಮಾಡುವುದರಲ್ಲಿ ಅರ್ಥ ಇದೆ ಅಲ್ವೇ ?
೬) ಮತ್ತೆ ನಮ್ಮೆ ಹಿರಿಯರು ಹೇಳಿದ್ದಾರೆ  ಸಾವಿರ ಸುಳ್ಳು ಹೇಳಿ 'ಮದುವೆ' ಮಾಡ ಬೇಕು ಅಂತ ; ಹಾಗಂದ್ರೆ ಸಾವಿರ ಸುಳ್ಳು ಹೇಳಿ ಅಂತಲ್ಲ ! ಒಂದು ಶುಭ ಕಾರ್ಯಕ್ಕೆ ಸುಳ್ಳು ಹೇಳಿದರೆ ಅಡ್ಡಿ ಇಲ್ಲ ಅಲ್ವೇ?
೭) ಇನ್ನು ಹುಟ್ಟು ಸುಳ್ಳು ಅಂದ್ರೆ ; ಕೆಲವರು ಹುಟ್ಟಿನಿಂದ ಸುಳ್ಳು ಹೇಳೋ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ ; ಅದೇ 'ಹುಟ್ಟು ಸುಳ್ಳು'

ಹಾಗೆ ಬರೆಯುತ್ತಾ ಹೋದರೆ ನಾನು ಕೂಡ ಸುಳ್ಳಿನ 'ಸರ ಮಾಲೆ' ಪೋಣಿಸಬೇಕಾಗುತ್ತೋ ಏನೋಪ್ಪ ! ಸುಳ್ಳಿನ ಇನ್ನೊಂದು ಅನಾನುಕೂಲತೆ. ಎಂದರೆ ನೀವು ಹೇಳಿದ ಸುಳ್ಳನ್ನ ನೆನಪಿಟ್ಟುಕೊಳ್ಳಬೇಕಾಗುವುದು.. ಬೇಡ ಬೇಡಾ ನನಗೆ ತುಂಬಾ ಮರೆವು ಸ್ವಾಮಿ !! ಸಧ್ಯಕ್ಕೆ ಇಲ್ಲಿಗೆ ನನ್ನ 'ಸುಳ್ಳಿನ ಪುರಾಣ ' ಕ್ಕೆ ಇತಿಶ್ರೀ ಹಾಡುತ್ತೇನೆ.  ಜೈ ಪುಂಡರೀಕ ವರದೇ ...............

ಶ್ರೀ ಗಣೇಶಾಯ ನಮಃ




ಗಣೇಶ ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಒಬ್ಬ ನಮ್ಮ ಮುದ್ದು 'ಗಣಪ'.  ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯ ದಿನ, ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ.  ವಿಶೇಷವಾಗಿ ಭಾರತದಲ್ಲಿ ಮಾತ್ರವಲ್ಲದೆ,  ಇತರೆ ಎಲ್ಲಾ ದೇಶಗಳಲ್ಲೂ ಗಣೇಶನನ್ನು ಪೂಜಿಸಲಾಗುತ್ತದೆ. ಹಾಗಾಗಿ ನಮ್ಮ ಮುದ್ದು ಗಣಪನನ್ನು 'Universally Worshipped & Accepted God '  ಅಂತಲೂ ಎಲ್ಲರೂ ಒಪ್ಪುತ್ತಾರೆ .ಶ್ರೀ ವಿನಾಯಕನನ್ನು ಗಜಾನನ, ಸುಮುಖ, ಗೌರಿತನಯ, ವಕ್ರ ತುಂಡ, ಪಾರ್ವತೀ ತನಯ, ಮೂಷಿಕ ವಾಹನ, ಮೋದಕ ಹಸ್ತ, ಚಾಮರ ಕರ್ಣ, ಇನ್ನು ಹೆಸರಿಸುತ್ತ ಹೋದರೆ ಅದಕ್ಕೆ ಕೊನೆಯೇ ಇಲ್ಲ.  ಅಬಾಲ ವೃದ್ಧರಾದಿಯಾಗಿ ಪ್ರತಿಯೊಬ್ಬರೂ ತುಂಬ ಇಷ್ಟ ಪಡುವ ದೇವರು ನಮ್ಮ ಮುದ್ದು ಮುದ್ದು ಬೆನಕ.  ಆನೆಯ ತಲೆ ನಂಬಿಕೆ,ಬುದ್ಧಿವಂತಿಕೆ ಮತ್ತು ವಿವೇಚನಾಶಕ್ತಿಯನ್ನು ಸೂಚಿಸುತ್ತದೆ;  ಒಂದು ದಂತ ಇರುವುದೆಂಬ ಸಂಗತಿಯಿಂದಾಗಿ ಬಲಗಡೆ ಸೊಂಡಿಲು ಇರುವ ಗಣಪತಿಯನ್ನು 'ಬಲ ಮುರಿ' ಎಂದೂ; ಸೊಂಡಿಲು ಇರುವ ಗಣಪತಿಯನ್ನು 'ಎಡ ಮುರಿ ಗಣಪತಿ' ಎಂದು ಹೇಳುವ ಪ್ರತೀತಿ. ಅಗಲವಾದ ಕಿವಿಗಳು ಇರುವುದರಿಂದ 'ಚಾಮರ ಕರ್ಣ' ನೆಂದು ಕರೆಯುತ್ತಾರೆ.  ಇದು ವಿವೇಕ,ನೆರವು ಕೋರುವ ಜನಗಳ ಮೊರೆಯನ್ನು ಆಲಿಸುವ ಸಾಮರ್ಥ್ಯವನ್ನು ಸೂಚಿಸುತ್ತದೆ.  ಗಣೇಶನ ವಾಹನ,ಇಲಿ ಅಥವಾ ಮೂಷಿಕ ಹಾಗಾಗಿ ಅವನನ್ನು 'ಮೂಷಿಕ ವಾಹನ' ಎಂದೂ ಕರೆಯುತ್ತಾರೆ.   ಪಾರ್ವತಿಯ ಮಗನಾದ್ದರಿಂದ 'ಪಾರ್ವತೀ ತನಯ' ಎನ್ನುತ್ತಾರೆ .  ಸಿದ್ದಿ-ಬುದ್ದಿಯರನ್ನು ಮದುವೆ ಯಾದುದರಿಂದ
ಗಣಪತಿಯ ಎಡ-ಬಲ ಗಳಲ್ಲಿ ಸಿದ್ದಿ-ಬುದ್ದಿ ಯಾರನ್ನು ಕಾಣಬಹುದು.

ಹೇ ವಿಘ್ನ ವಿನಾಶಕ ನನ್ನದೊಂದು ಪುಟ್ಟು ಕೋರಿಕೆ ನಿನ್ನಲ್ಲಿ  ಮನುಕುಲಕ್ಕೆ ಸೂಕ್ಷ್ಮ ಬುದ್ದಿಯನ್ನು ಸದಾ ಕರುಣಿಸು
ಪ್ರಕೃತಿಯನ್ನು ಹದಗೆಡಿಸದಿರುವ ಮತಿ ಅನುದಿನ ಕೊಡು ; ಎಲ್ಲ ಪ್ರಾಣಿವರ್ಗ, ಸಸ್ಯವರ್ಗವನ್ನೂ ಪ್ರೀತಿಯಿಂದ ಕಾಪಾಡುವ ಹೃದಯ ಕೊಡು  ಬದುಕ ಪ್ರೀತಿಸಿ ಬದುಕಿ ಬದುಕಲು ಬಿಡುವಂತ ದಿವ್ಯ ದೃಷ್ಟಿ ಕೊಡು
ಪರರ ತಪ್ಪ ಕ್ಷಮಿಸುವಂಥ  ಧೈರ್ಯವನ್ನು  ಪ್ರದರ್ಶಿಸುವ ಅವಕಾಶವನ್ನು ಮರೆಯದೆ ಕಲ್ಪಿಸು

ದುಷ್ಟರ ಶಿಕ್ಷಿಸು , ಶಿಷ್ಟರ ಸದಾ ರಕ್ಷಿಸು ವಿಘ್ನಗಳ ಕಳೆಯೋ 'ವಿಘ್ನ ವಿನಾಶಕ''

ನೀನೆ ತೋರುವೆ ದಾರಿಯ ನಮಗೆ ನಿನ್ನನೆ ನಂಬೆ ಮುಂದಡಿ ಇಡುವೆ ಹೇ ಗಣಪತಿಯೇ ಸಲಹು ನಮ್ಮನನವರತ

ಮೂಷಿಕ ವಾಹನ ಮೋದಕ ಹಸ್ತಾ , ಚಾಮರ ಕರ್ಣ ವಿಳಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ, ವಿಘ್ನ ವಿನಾಯಕ ಪಾದ ನಮಸ್ತೆ ನಮಸ್ತೆ ನಮಸ್ತೆ  ನಮಃ
 

KOPA NIGRAHISI




ಕೋಪವನ್ನು ನಿಗ್ರಹಿಸದಿದ್ದಲ್ಲಿ ನೋವಿನ ಸುಳಿಗೆ ಸಿಲುಕಲೇಬೇಕು. ಇದಕ್ಕೊಂದು ನೀತಿ ಕಥೆಯುಂಟು.
ಒಬ್ಬ ಹುಡುಗ ಮಹಾ ಕೋಪಿಷ್ಟ. ಸುಲಭವಾಗಿ ಕೆರಳುತ್ತಿದ್ದ. ಇದನ್ನು ಕಂಡು ರೋಸಿದ ತಂದೆ ತನ್ನ ಮಗನಿಗೆ ಒಂದು ಚೀಲ ತುಂಬಾ ಮೊಳೆಗಳನ್ನು ಕೊಟ್ಟು ಪ್ರತೀ ಸಲ ಕೋಪ ಬಂದಾಗ ಮನೆಯ ಹಿಂದಿನ ಗೋಡೆಗೆ ಒಂದು ಮೊಳೆ ಹೊಡೆಯಲು ಹೇಳುತ್ತಾನೆ. ಉತ್ಸಾಹದಿಂದ ಹೋಗುವ ಹುಡುಗ ಮೊದಲ ದಿನವೇ ೩೭ ಮೊಳೆಗಳನ್ನು ಹೊಡೆದು ಹಾಕುತ್ತಾನೆ ಗೋಡೆಗೆ. ಒಂದೆರಡು ವಾರಗಳಲ್ಲಿ ತನ್ನ ಕೋಪ ತಾಪ ಎಲ್ಲಾ ತಹಬಂದಿಗೆ ಬಂದು ಗೋಡೆಗೆ ಹೊಡೆಯಬೇಕಾದ ಮೊಳೆಗಳು ಸಂಖ್ಯೆಯಲ್ಲಿ ಕಡಿಮೆಯಾಗುತ್ತವೆ. ತನ್ನ ಅಪ್ಪ ಹೇಳಿದ ಹಾಗೆ ಮೊಳೆ ಹೊಡೆಯುವುದಕ್ಕಿಂತ ಸುಲಭ ತನ್ನ ಕೋಪವನ್ನು ನಿಯಂತ್ರಿಸುವುದು ಎಂದು ಈ ಹೊತ್ತಿಗಾಗಲೇ ಹುಡುಗ ಅರಿತು ಕೊಳ್ಳುತ್ತಾನೆ. ಕೊನೆಗೊಂದು ದಿನ ಹುಡುಗ ಮೊದಲಿನ ಥರ ಕೋಪಿಷ್ಠನಾಗದೇ ಮಂದಸ್ಮಿತನಾಗುತ್ತಾನೆ, ಸಂಯಮಿಯಾಗುತ್ತಾನೆ, ಮೊಳೆಯ ಚೀಲ ಬರಿದಾಗುತ್ತದೆ. ಈ ವಿಷಯವನ್ನು ತನ್ನ ತಂದೆಗೆ ಬಂದು ಹೇಳಿದಾಗ ತಂದೆ ಹೇಳುತ್ತಾನೆ, ಮಗನೇ, ಈಗ ಹೋಗಿ ನೀನು ಹೊಡೆದ ಮೊಳೆಗಳನ್ನೆಲ್ಲಾ ದಿನಕ್ಕೊಂದರಂತೆ ಕೀಳು ಎಂದು. ಮತ್ತೊಮ್ಮೆ ಗೋಡೆ ಕಡೆ ಮರಳಿದ ಹುಡುಗ ಸಾವಧಾನದಿಂದ ದಿನಕ್ಕೊಂದರಂತೆ ಒಂದೊಂದೇ ಮೊಳೆ ಗಳನ್ನು ಕೀಳುತ್ತಾನೆ. ಒಂದೆರಡು ವಾರಗಳ ತರುವಾಯ ಹುಡುಗ ಬಂದು ತಾನು ಎಲ್ಲಾ ಮೊಳೆಗಳನ್ನು ಕಿತ್ತ ವಿಷಯ ಹಿಗ್ಗುತ್ತಾ ತಂದೆಗೆ ತಿಳಿಸುತ್ತಾನೆ. ಮಗನನ್ನು ನೋಡಿ ಮುಗುಳ್ನಗುತ್ತಾ ಅವನ ಕೈ ಹಿಡಿದು ಕೊಂಡು ಹಿತ್ತಲಿನ ಗೋಡೆಗೆ ಬಂದ ತಂದೆ ಮಗನ ತಲೆ ತಡವುತ್ತಾ ಹೇಳುತ್ತಾನೆ, ಮಗೂ, ಎಷ್ಟು ಸುಂದರ ಕೆಲಸ ನೀನು ಮಾಡಿದೆ, ಆದರೆ ನೋಡು ಒಮ್ಮೆ ಗೋಡೆಯನ್ನು. ಮೊದಲಿನ ಹಾಗಿದೆಯೇ ಗೋಡೆ? ಎಷ್ಟೊಂದು ತೂತುಗಳು ಬಿದ್ದಿವೆ ನೋಡು ಗೋಡೆಯ ಮೇಲೆ. ಈ ಗೋಡೆ ಮೊದಲಿನ ಹಾಗೆ ಆಗಲು ಸಾಧ್ಯವೆ? ಎಂದಿಗೂ ಇಲ್ಲ. ನೀನು ಕೋಪದಲ್ಲಿ ಆಡಿದ ಮಾತುಗಳೂ ಸಹ ಹಾಗೆಯೇ. ನಿನ್ನ ಕೋಪದ ಮಾತುಗಳು, ಜನರಿಗೆ ಮಾಡಿದ ನೋವು ನೀನು ಮೊಳೆಗಳಿಂದ ಗೋಡೆಗೆ ಮಾಡಿದ ತೂತುಗಳಂತೆ. ಅವೆಂದೂ ಮಾಸಲಾರವು. ಒಬ್ಬನಿಗೆ ಚೂರಿ ಇರಿದು ಆ ಚೂರಿಯನ್ನು ಹಿಂದಕ್ಕೆ ಎಳೆಯಬಹುದು, ಆದರೆ ಆ ಚೂರಿ ಮಾಡಿದ ಗಾಯ? ಆ ಗಾಯ ಮಾಸುವುದೇ? ನೀನೆಷ್ಟೇ ಕ್ಷಮೆ ಕೋರಿದರೂ ಆ ಗಾಯ ಅಲ್ಲೇ ಇರುತ್ತದೆ.

ಅನರ್ಘ್ಯ ರತ್ನಗಳಂಥ ಮಾತುಗಳನ್ನು ತನ್ನ ಪ್ರೀತಿಯ ತಂದೆಯ ಬಾಯಿಂದ ಆಲಿಸಿದ ಹುಡುಗ ದಂಗುಬಡಿದವನಂತೆ, ತಟಸ್ಥನಾಗಿ ನಿಂತು ತನ್ನ ತಂದೆಯನ್ನೇ ನೋಡುತ್ತಾ ನಿಂತ ಕಣ್ಣೀರು ಹರಿಸುತ್ತಾ.