Friday, May 15, 2015

ಬೇಸಿಗೆ ರಜೆ



ನನ್ನ ನೆನಪಿನಂಗಳದಿಂದ ೩ : 


ಪ್ರತಿ ವರುಷ ಬೇಸಿಗೆ ರಜೆ ಬಂತೆಂದರೆ ನಮಗೆ ಮಜವೋ ಮಜಾ!  ಏಕೆಂದರೆ ಗೆಳತಿಯರೊಡನೆ ಅಳಗುಳಿ ಮನೆ, ಚೌಕ ಭಾರ, ರಿಂಗ್ ಆಟ , ಜೂಟಾಟ,  ಕಣ್ಣಾ ಮುಚ್ಚಾಲೆ ಆಟ, ಕುಂಟೆ ಬಿಲ್ಲೆ , ಹೀಗೆ ಸುಮಾರು ಆಟಗಳನ್ನು ಖುಷಿ ಇಂದ ಆಡುತ್ತಿದ್ದೆವು.  ದೇಹಕ್ಕೆ ಒಳ್ಳೆ ಗಾಳಿ ಬೆಳಕು, ವ್ಯಾಯಾಮ ಸಿಗುತಿಟ್ಟು,  ಹಾಗಾಗಿ ದೇವರ ದಯೆ ಇಂದ ಸದಾ ಅರೊಗ್ಯವಂತರಾಗಿದ್ದೆವು.  ಯಾವುದೇ ಕಾರಣಕ್ಕೂ ವೈದ್ಯರ ಬಳಿ ಹೋಗುವ ಪ್ರಮೇಯ ಬರುತ್ತಲೇ ಇರಲಿಲ್ಲ. ನನಗೋ ವಿಪರೀತ ಸ್ನೇಹಿತೆಯರು.  ಒಬ್ರಾ ಇಬ್ರಾ, ಶಾಂತ, ಸುಜಾತ, ಜಯ (ಜಯ ಹೆಸರಿನ ೪ ಜನ ನಮ್ಮ ಶಾಲೆಯಲ್ಲಿ ನನ್ನದೇ ತರಗತಿಯಲ್ಲಿ ಓದುತ್ತಿದ್ದರು)  ಹಾಗಾಗಿ ಅವರಿಗೆ ಅಡ್ಡ ಹೆಸರಿತ್ತು , ಒಬ್ಬಳು ಕುಳ್ಳಿ ಜಯ, ಬಿಳಿ ಜಯ, ಕರ್ಪಿ ಜಯ, ಗುಗುರು ಕೂದಲು ಜಯ) ಶಿವಮ್ಮ, ಶಿವನ ಹಳ್ಳಿಯಲ್ಲಿ ಹುಟ್ಟಿದ್ದರಿಂದ ಅವಳಿಗೆ ಶಿವಮ್ಮ ಎಂದೇ ನಾಮಕರಣ ಮಾಡಿದ್ದರಂತೆ ! ) ಕಾಡಮ್ಮ , ಸುಶೀಲ, ಇಂದ್ರ, ಲಲಿತ, ಲಕ್ಷ್ಮಿ, ಪ್ರಭ, ಉಷಾ, ಕೃಷ್ಣ ವೇಣಿ ( ಇವಳಂತೂ ಹೆಸರಿಗೆ ತಕ್ಕಂತೆ ಕಾಡುಗಪ್ಪು ಬಣ್ಣ) ಹೀಗೆ ಕೆಲವರ ಹೆಸರು ನೆನಪಿಗೆ ಬರುತ್ತಿಲ್ಲ.  ಚೆನ್ನಾಗಿ ಬಿಸಿಲು ಮಳೆ ಎನ್ನದೆ ಶಾಲೆ ಸಮೀಪವೇ ಇದ್ದದರಿಂದ ಶಾಲೆಯ ಮೈದಾನದಲ್ಲಿ ದಣಿವಾಗುವವೆಗೂ  ಆಟ ಆಡಿ ಊಟದ ಸಮಯದ ಹೊತ್ತಿಗೆ ಎಲ್ಲರೂ ಮನೆಗಳಿಗೆ ಹೋಗಿ ಊಟ ಮುಗಿಸಿ ಮತ್ತೆ ಆಡಲು ಶುರು ಮಾದುತ್ತಿದ್ದೆವು.  ಮತ್ತೆ ಸಂಜೆ ರಾಜಾಜಿನಗರದ ನವರಂಗ್ ಥಿಯೇಟರ್ ಹತ್ತಿರ ನನಗೆ ಸರಿಯಾಗಿ ನೆನಪಿದೆ ಅಂದರೆ ನಿಜಲಿಂಗಪ್ಪ ಕಾಲೇಜ್ ಹತ್ತಿರ ಸಿಟಿ ಸೆಂಟ್ರಲ್ ಲೈಬ್ರರಿ ಒಂದಿತ್ತು , ಅಲ್ಲಿಗೆ ಮನೆ ಇಂದ ಸುಮಾರು ೩-೪ ಕಿ ಮೀ  ಇದ್ದಿರಬಹುದು ನಡೆದು ಕೊಂಡು  ಹೋಗಿ ಒಳ್ಳೊಳ್ಳೆ ಪುಸ್ತಕಗಳನ್ನು ಓದುವ ಅಭ್ಯಾಸ ಇಟ್ಟುಕೊಂಡಿದ್ದೆವು.  ನನಗೆ ಎಷ್ಟೇ ವರುಷ ಆದರೂ ಮರೆಯಲಾರದ ಒಂದು ಮಕ್ಕಳ ಕಥೆ ಎಂದರೆ 'ರಾಜು ಮತ್ತು  ಹುರುಳಿ ಬೀಜ' ಅದು ಎಷ್ಟೊಂದು ಚೆನ್ನಾಗಿತ್ತು ಎಂದರೆ ಮನೆಗೆ ಬಂದು ಅಪ್ಪನಿಗೆ ಅಮ್ಮನಿಗೆ ಅಕ್ಕ , ಅಣ್ಣಂದಿರಿಗೆ ಹೇಳಿದ್ದು ಹೇಳಿದ್ದೆ.  ನನಗೆ ಈಗಲೂ ಆ ಕಥೆ ಅಚ್ಚು ಮೆಚ್ಚು .  ನಂತರ ಸ್ವಲ್ಪ ಹೈ ಸ್ಕೂಲ್ ಗೆ ಬರೋ  ಹೊತ್ತಿಗೆ ನನ್ನ ಮೆಚ್ಚಿನ ತ್ರಿವೇಣಿ ಯವರ ಕಾದಂಬರಿಗಳನ್ನು ಓದುತ್ತಿದ್ದೆ.  ಅರ್ಯಾಭ ಪಟ್ಟಾಭಿ, ತ್ರಿವೇಣಿ, ಅವರ ಕಾದಂಬರಿ ಗಳು ತುಂಬಾ ಒದುತ್ತಿದ್ದೆ.  ನನ್ನಮ್ಮನಿಗೂ ಅವರು ಬರೆದ ಕಾದಂಬರಿಗಳು ತುಂಬಾ ಇಷ್ಟ .  ನಮ್ಮ ಮನೆಯಲ್ಲಿ ಎಲ್ಲರಿಗೂ ಓದುವ ಹುಚ್ಚು. ಲೈಬ್ರರಿಗೆ  ಹೋಗುವುದು ಬಹಳ ದೂರ ಆಗುತ್ತಿತ್ತು, ಪಾಪ ಮಕ್ಕಳು ನಡೆದು ಹೊಗುವುದನ್ನು ನೋಡಲಾರದೆ ನನ್ನಮ್ಮ ಮನೆಯಲ್ಲೇ ದಿನ ಪತ್ರಿಕೆಯ ಜೊತೆ ಸುಧಾ, ಪ್ರಜಾಮತ, ತರಂಗ, ತುಷಾರ, ಚಂದಮಾಮ, ಬಾಲ ಮಿತ್ರ, ಈ ರೀತಿ ಸುಮಾರು ಪುಸ್ತಕ ಗಳನ್ನೂ ಕೊಂಡು ಕೊಂಡು ಓದಲು ಆರಂಭಿಸಿದೆವು .  ಆಗ ಒಳ್ಳೆ ಪೀಕಲಾಟಕ್ಕೆ ಬಂತು ನೋಡಿ ಪೇಪರ್ ನವ ಪುಸ್ತಕ ಕೊಡಲು ಬಂದಾಗ ಓಡಿ ಹೋಗಿ ನಾ ಮೊದಲು ತಾ ಮೊದಲು ಎಂದು ಕಿತ್ತು ಕೊಂಡು ಓದುತ್ತಿದ್ದೆವು.  ಧಾರಾವಾಹಿಗಳು ಮುಂದಿನ ವಾರ ಏನಾಗುತ್ತದೋ ಎಂದು ಕುತೂಹಲ ಹುಟ್ಟಿಸುತ್ತಿದ್ದವು , ಹಾಗಾಗಿ ಎಲ್ಲರು ಕಿತ್ತಾಡಿ ಓದುತ್ತಿದೆವು.  ಟಿ ಕೆ ರಾಮರಾವ್ , ಎಂಡ ಮೋರಿ ಅವರ ಕಥೆಗಳು ಅಚ್ಚರಿ ಹುಟ್ಟಿಸುತ್ತಿದ್ದವು, ಮುಂದಿನ ವಾರಕ್ಕಾಗಿ ಕಾಯುವಂತೆ ಮಾಡುತ್ತಿದ್ದವು.  ಅಂದಿನ ದಿನಗಳು ಇಂದೆಲ್ಲಿ ?? ಅಪ್ಪ ಕೂಡ ತುಂಬಾ ಓದುವ ಹವ್ಯಾಸ ಅವರು ಸಂಜೆ ಹೊತ್ತು ಕೆಲಸ ಮುಗಿಸಿ ಬಂದು ನವರಂಗ್ ಥಿಯೇಟರ್ ಪಕ್ಕದ ಪಾರ್ಕಿನಲ್ಲಿ ನಮ್ಮನ್ನು ಆಡಲು ಕರೆದು ಕೊಂಡು  ಹೋಗಿ ಪಾರ್ಕ್ನಲ್ಲಿ ಕುಳಿತು ಸಂಜೆ ಬರುತ್ತಿದ್ದ ಸಂಜೆ ವಾಣಿ ಪತ್ರಿಕೆ ಸಹಾ ಕೊಂಡು ಓದಿ ಮುಗಿಸಿ , ನಮ್ಮನು ಪಾರ್ಕ್ ನಿಂದ ಕರೆದು ಕೊಂಡು ಬರುತ್ತಿದ್ದರು.  ಅಹಾ ಎಂತಹ ದಿನಗಳವು !! ಮನೆಯಲ್ಲಿ ಟಿವಿ , ಮೊಬೈಲ್, ಒಂದೂ ಇರದಂಥ ಆ ಕಾಲದಲ್ಲಿ , ಆಟ, ಊಟ, ಓಟ ಎಂದು ನಮ್ಮ ಬಾಲ್ಯ ಎಷ್ಟು ಆನಂದಮಯ ವಾಗಿತ್ತು.  ಮತ್ತೆ ನನ್ನಮ್ಮ ರಾಜಾಜಿನಗರದಲ್ಲಿ  ಇದ್ದ 'ಮಾತೆ ಮಹಾದೇವಿ' ಅವರ ಪ್ರವಚನ ಇದ್ದ ದಿನಗಳು ಪ್ರವಚನಕ್ಕೆ ಕರೆದೊಯ್ಯುತ್ತಿದ್ದರು .  ಶಾಂತ ಚಿತ್ತರಾಗಿ ಮಕ್ಕಳು ವೃಧ್ಧ ರೋಪಾದಿಯಾಗಿ ಎಲ್ಲರೂ ಪ್ರವಚನ ಆಲಿಸುತ್ತಿದ್ದರು. ೬ ರಿಂದ ೯ ಘಂಟೆಗಳ ಕಾಲ ಮುಗಿಸಿ ಕೊಂಡು  ೩-೪ ಕಿ ಮೀ ಮಾತನಾಡುತ್ತ ನಡೆದು ಬರುತ್ತಿದ್ದೆವು ದಾರಿ ಸವೆದದ್ದೇ ಗೊತ್ತಗುತ್ತಲಿರಲಿಲ್ಲ.  ಅಣ್ಣಾವ್ರ ಸಿನಿಮಾ ಬಂದರಂತೂ ಮನೆ ಮಂದಿಯೆಲ್ಲ ಟಿಕೆಟ್ ಕೊಂಡು ಒಂದೇ ಸಾಲಿನಲ್ಲಿ ಕುಳಿತು ನೋಡುವ ಆ ಮಜವೇ ಬೇರೆ !  ನನ್ನ ಅಣ್ಣಂದಿರು  ಫಸ್ಟ್ ಡೇ ಫಸ್ಟ್ ಶೋ ನೋಡುವ ಹುಚ್ಚು ಆಗಿನಿಂದಲೂ ಇತ್ತು  ಅದರಲ್ಲೂ ಅಣ್ಣಾವ್ರ ಚಿತ್ರಕ್ಕೆ ಕೇಳ ಬೇಕೇ ವಿಪರೀತ ಜನ ಜಂಗುಳಿ.  ಆದರೂ ಅವರು ಫಸ್ಟ್ ಡೇ ಫಸ್ಟ್ ನೋಡಿಯೇ ತೇರುತ್ತಿದ್ದರು.  ಹೇಗೆ ಕೇಳಿ ಮಜಾ ಇದೆ ಇಲ್ಲಿ,  ಮಹಿಳೆಯರ ಸಾಲಿನಲ್ಲಿ ಅಂತಹ ಗಲಾಟೆ ಗಿಲಾಟೆ  ಇರುತ್ತಿರಲಿಲ್ಲ ನಾವು ಊರಿಗೆ ಮುಂಚೆ ಹೋಗಿ ಸಾಲಿನಲ್ಲಿ ನಿಂತು ನಾನು ನನ್ನ ಚಿಕ್ಕ ಅಕ್ಕ  ಎರಡು ಟಿಕೆಟ್ ಕೊಂಡು ಅಣ್ಣಂದಿರಿಗೆ ಟಿಕೆಟ್ ಕೊಡಿಸಿ ಅವರ ಆಸೆ ಪೂರೈಸುತ್ತಿದ್ದೆವು. ಕೆಲವೊಮ್ಮೆ ಮಹಿಳೆಯರ ಸಾಲಿನಲ್ಲೂ ಟಿಕೆಟ್ ದೊರೆಯದೆ ಬ್ಲಾಕ್ ಮಾರ್ಕೆಟ್ ನಲ್ಲಿ ಟಿಕೆಟ್ ಕೊಂಡು , ಮಕ್ಕಳು ಎಂದರೆ ಕಮ್ಮಿ ದರದಲ್ಲಿ ಕೊಡುತ್ತಿದ್ದರು,  ಅದನ್ನು ಅಣ್ಣನಿಗೆ ಕೊಟ್ಟು ಬರುತ್ತಿದ್ದೆವು.    ಮತ್ತೆ ನನ್ನ ಅಣ್ಣ ನಮಗೆ ಕಡ್ಲೆ ಮಿಟಾಯಿ , ಕಡಲೆ ಕೊಡಿಸುತ್ತಿದ್ದ ಅದನ್ನು ತಿನ್ನುತ್ತ ಮನೆ ತಲುಪಿದ್ದೆ ಆಯಿತು .  ನಂತರ ರಶ್ ಕಡಿಮೆ ಆದ ಕೆಲವು ದಿನಗಳ ನಂತರ ಮನೆ ಮಂದಿ ಎಲ್ಲ ಹೋಗಿ ಅಣ್ಣಾವ್ರ ಯಾವ ಚಿತ್ರವನ್ನು ಮಿಸ್ ಮಾಡದೆ ನೋಡಿದ್ದೇವೆ .  ನನ್ನ ಅಣ್ಣಂದಿರು ಎರಡೆರಡು ಬಾರಿ ನೋಡುತ್ತಿದ್ದರು !! ಒಂದೇ ಒಂದು ಚಿತ್ರ ಕೂಡ ಮಿಸ್ ಮಾಡದೆ ನೋಡಿದ್ದೇವೆ.  ಎಲ್ಲ ಚಿತ್ರಗಳನ್ನು ನಮ್ಮ ನೆಚ್ಚಿನ 'ನವರಂಗ್' ಚಿತ್ರಮಂದಿರದಲ್ಲಿ ನೋಡೇ ನೋಡುತ್ತಿದೆವು.  ನಾನು ಆರತಿ ಅವರ ದೊಡ್ಡ ಅಭಿಮಾನಿ ಕನ್ನಡ ಪ್ರಭ ದಿನ ಪತ್ರಿಕೆಯಲ್ಲಿ ಬರುತ್ತಿದ್ದ ಆರತಿ , ಅಣ್ಣಾವ್ರು, ಚಿತ್ರ ಗಳನ್ನೂ ಕಟ್ ಮಾಡಿ ಒಂದು ಆಲ್ಬಮ್ ಮಾಡಿ ಇಟ್ಟು ಕೊಂಡಿದ್ದೆ , ಅದರಲ್ಲೂ ಡಾ ರಾಜ್ ಆರತಿ ಅವರ ಜೋಡಿ ನನಗೆ ಬಹಳ ಬಹಳಾ ಇಷ್ಟ .  ಕಸ್ತೂರಿ ನಿವಾಸದಿಂದ ಹಿಡಿದು ಅವರ ಬಂಗಾರದ ಪಂಜರ, ರಾಜ ನನ್ನ ರಾಜ, ಮೂರುವರೆ ವಜ್ರಗಳು, ಹೀಗೆ ಹಲವಾರು ಚಿತ್ರದ ಅವರಿಬ್ಬರ ಆಲ್ಬಮ್ ಈಗಲೂ ನನ್ನ ಅಣ್ಣನ ಬಳಿ ಇದೆ.  ಆರತಿ ವಿಷ್ಣು ಅವರ ಹೊಂಬಿಸಿಲು, ಹೊಸಿಲು ಮೆಟ್ಟಿದ ಹೆಣ್ಣು, ವಸಂತ ಲಕ್ಷ್ಮಿ ಇವನ್ನೆಲ್ಲ ಕಟ್ ಮಾಡಿ ಒಂದು ಹಳೆ ಪುಸ್ತಕ ದಲ್ಲಿ ಅಂಟಿಸಿ ಇಡುತ್ತಿದೆ.   ನನ್ನ ಅಣ್ಣನ ಆಲ್ಬಮ್ ನಲ್ಲಿ ಅಣ್ಣಾವ್ರ ಚಿತ್ರಗಳನ್ನು ಅಂಟಿಸಿ ಕೊಟ್ಟರೆ ಅವನು ಒಂದು ಚಿತ್ರಕ್ಕೆ  ೨ ಪ್ಯಾರಿಸ್ ಚಾಕಲೇಟ್ ಕೊಡಿಸುತ್ತಿದ್ದ.  ಈ ಕಡ್ಡಾಯದ ಮೇರೆಗೆ ಅವನಿಗೆ ಎಷ್ಟೊಂದು ಅಣ್ಣಾವ್ರ ಚಿತ್ರಗಳನ್ನು ಕನ್ನಡ ಪ್ರಭ ದಿಂದ ಹರಿದು ಅಂಟಿಸಿ ಕೊಡುತ್ತಿದ್ದೆ .  ನನ್ನಮ್ಮ ಕೂಡ ಇಂದಿರಾ ಗಾಂಧಿ,  ಎಮ್.ಎಸ್ ಸುಬ್ಬಲಕ್ಷ್ಮಿ , ಲತಾ ಮಂಗೇಶ್ಕರ್ , ಆಶಾ ಭೋಂಸ್ಲೆ    ಸುನಿಲ್ ಗಾವಸ್ಕರ್, ಕಪಿಲ್ ದೇವ್, ಅವ್ರ ಮದುವೆ  ಆದ ಚಿತ್ರಗಳು ಇವೆಲ್ಲಾ ಸಂಗ್ರಹಿಸಿ ಇಡುತ್ತಿದ್ದರು .  ಇಂತಹ ಹವ್ಯಾಸಗಳು ಎಷ್ಟು ಮುದ ಕೊಡುತ್ತವೆ ಅಲ್ಲವೇ ?  ಈಗ ಇವೆಲ್ಲ ಮರೆಯಾಗುತ್ತಿದೆ.   ಅಣ್ಣಾವ್ರ ಒಂದು ಹಾಡಿನ ಸಾಲು ನೆನಪಾಗುತ್ತಿದೆ '' ಕೈ ಜಾರಿ ಒಡೆದ ಮುತ್ತು, ನೀವೀಗ ಕಳೆದಾ ಹೊತ್ತು ಬೇಕೆಂದು ಬಯಸಲು ಮತ್ತೆ ದೊರಕುವುದೇ ದೊರಕುವುದೇ ??? ಎಷ್ಟು ನಿಜ ಅಲ್ಲವೇ ??

No comments:

Post a Comment