Thursday, August 13, 2015

ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಡುವ ಪದ್ಧತಿ ಹೇಗೆ ಬಂತು ???



ಮುತ್ತೈದೆಯರಿಗೆ  ಅರಿಶಿನ ಕುಂಕುಮ ಹಾಗೂ ತಾಂಬೂಲ ಕೊಡುವ ಪದ್ಧತಿ ಹೇಗೆ ರೂಢಿಗೆ ಬಂತು ಎಂಬುದರ ಬಗ್ಗೆ ನಾನು ಚಿಕ್ಕವಳಿದ್ದಾಗ ನಮ್ಮಮ್ಮನನ್ನು  ಕೇಳುತ್ತಲೇ  ಇದ್ದೆ.  ಒಂದು ಬೇಸಿಗೆ ರಜೆಯ ದಿನ ನಮ್ಮಮ್ಮ  ಕೆಲಸ ಕಾರ್ಯಗಳನ್ನೆಲ್ಲ ಮುಗಿಸಿ ಅರಿಶಿನ ಕುಂಕುಮ ಕೊಡುವ ಪದ್ಧತಿ ಹೇಗೆ ಬಂತು ಅಂತ ಒಂದು  ಒಳ್ಳೆಯ ಕಥೆ ಇದೆ ಅದನ್ನ ನಮ್ಮಜಿ ನನಗೆ ಹೇಳ್ತಾ ಇದ್ದರು ಅದನ್ನೇ ನಾನು ನಿನಗೆ ಹೇಳ್ತೀನಿ ಅಂತ ನಮ್ಮಮ್ಮ ಈ ಕಥೆ ಹೇಳಿದ್ದರು . 
ಬಹಳ ಹಿಂದೆ ಒಂದು ಊರಿನಲ್ಲಿ ಮೂರು ಜನ ಒಂದೇ ಮನೆಯ ಅಣ್ಣ ತಮ್ಮಂದಿರು , ಒಂದೇ ಮನೆಯ ಅಕ್ಕ-ತಂಗಿಯರನ್ನು ಮದುವೆ ಮಾಡಿಕೊಂಡು ಸುಖವಾಗಿದ್ದರು . ಅವರ ತಂದೆಯ ಆಸ್ತಿಯನ್ನು ಸಿಕ್ಕಾ ಪಟ್ಟೆ, ಯದ್ವಾ ತದ್ವಾ ಪೋಲು ಮಾಡುತ್ತಾ ಹಣವನ್ನು ನೀರಿನಂತೆ ಚೆಲ್ಲುತ್ತ ಐಶಾರಾಮಿ ಜೀವನ ನಡೆಸುತ್ತಿದ್ದರು . ಆ ಮೂವರು ಅಕ್ಕ-ತಂಗಿಯರಲ್ಲಿ ದೊಡ್ಡವಳು ಎಷ್ಟೇ ಬುದ್ದಿ ಹೇಳಿದರೂ ಕೇಳದೆ ಅವಳ ತಂಗಿಯರು ಕೂಡ ಗಂಡಂದಿರೊಡನೆ ಹಣ ಪೋಲು ಮಾಡುತ್ತಾ ಇಷ್ಟ ಬಂದಂತೆ ಜೀವನ ನಡೆಸುತ್ತಿದ್ದರು.
ಆ ಮೂರು ಜನರಲ್ಲಿ  ಅಕ್ಕ ತುಂಬಾ ಒಳ್ಳೆಯವಳಾಗಿದ್ದು , ದೇವರಲ್ಲಿ, ಗುರು ಹಿರಿಯರಲ್ಲಿ ಭಕ್ತಿ ಹೊಂದಿದವಳಾಗಿದ್ದು ಒಳ್ಳೆಯ ಹೃದಯವಂತಿಕೆಯ ಸಾಧ್ವಿ . ಅವಳ ದಿನಚರಿ ಪ್ರತಿ ನಿತ್ಯ ಬೆಳಿಗ್ಗೆ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ಮುಂಬಾಗಿಲಿಗೆ ದೊಡ್ಡ ದೊಡ್ಡ ರಂಗೋಲಿ ಹಾಕಿ , ದೇವರ ಪೂಜೆ ಮಾಡಿ, ಮನೆಯನ್ನು ಶುಚಿಗೊಳಿಸಿ ನಂತರ ಅಡುಗೆ ಕೆಲಸಕ್ಕೆ ಮುಂದಾಗುತ್ತಿದ್ದಳು . ಅವಳ ತಂಗಿಯರು ಬಹಳಾ ಸೋಮಾರಿಗಲಾಗಿದ್ದು ಅವಳ ಯಾವುದೇ ಕೆಲಸಕ್ಕೂ ಸಹಾಯ ಮಾಡದೆ ತಿಂದು ಉಂಡು ಹಣವನ್ನು ತಮಗಿಚ್ಚೆ ಬಂದಂತೆ ಪೋಲು ಮಾಡುತ್ತಾ ಅಕ್ಕನನ್ನು ಕೆಲಸದವಳಂತೆ ನಡೆಸಿ ಕೊಳ್ಳುತ್ತಿದ್ದರು .
ಇದನ್ನು ಕಂಡ ಸಾಕ್ಷಾತ್ ಲಕ್ಷ್ಮಿಗೆ ಇವರ ಮೇಲೆ ಬಹಳ ಕೋಪ ಬನ್ದಿತು. ನಾನ್ಯಾಕೆ ಇವರ ಮನೆಯಲ್ಲಿ ಕಾಲು ಮುರಿದುಕೊಂಡು ಬಿದ್ದಿರ ಬೇಕು ? ನನ್ನ ಮೇಲೆ ಅಗೌರವ ತೋರುವವರ ಮನೆಯಲ್ಲಿ ನಾನು ಇರಬಾರದು ಎಂದು ನಿರ್ಧರಿಸಿದಳು . ಬೆಳ್ಳಂ ಬೆಳಿಗ್ಗೆ ಮನೆ ಇಂದ ಹೊರ ಹೋಗುವ ನಿರ್ಧಾರ ಮಾಡಿ ಬೆಳಿಗ್ಗೆ ಆಗುವುದೇ ತಡ ಭ ರ ಭರನೇ ಅಲ್ಲಿಂದ ಹೊರಡಲು ಯತ್ನಿಸಿದಳು . ಮುಂಬಾಗಿಲಲ್ಲಿ ರಂಗೋಲಿ ಹಾಕುತ್ತಿದ್ದ ಅಕ್ಕ ಲಕ್ಷ್ಮಿಯನ್ನು ತಡೆದಳು. ''ತಾಯಿ ಯಾಕಿ ಕೋಪ , ಯಾಕೆ ನಮ್ಮನ್ನು ತೊರೆದು ಹೋಗುವ ಈ ನಿರ್ಧಾರ ? '' ಎಂದು ಪ್ರಶ್ನಿಸಿದಳು . ಅಗಾ ಸಾಕ್ಷಾತ್ ಲಕ್ಷ್ಮಿ ''ನಿನ್ನ ಗಂಡ, ಅವನ ತಮ್ಮಂದಿರು, ಹಾಗೂ ನಿನ್ನ ತಂಗಿಯರು ಸಹಾ ನನಗೆ ಗೌರವ ಕೊಡದೆ ನನ್ನನ್ನು ತುಚ್ಚವಾಗಿ ಕಾಣುತ್ತಿದ್ದಾರೆ ಅವರಿಗೆ ತಕ್ಕ ಪಾಠ ಕಲಿಸಬೇಕೆಂದರೆ ನಾನು ಇಲ್ಲಿಂದ ಹೋಗಲೇ ಬೇಕು, ನನ್ನನ್ನು ತಡೆಯಬೇಡ ಎಂದಳು . ಅಕ್ಕ ಎಷ್ಟೇ ಪರಿ ಪರಿಯಾಗಿ ಬೇಡಿಕೊಂಡರೂ ಲಕ್ಷ್ಮಿಯ ಮನ ಕರಗಲಿಲ್ಲ. ಆಗ ಅಕ್ಕ ''ತಾಯಿ ನನ್ನಿಂದ ನಿನ್ನ ನಿರ್ಧಾರ ಬದಲಿಸಲು ಆಗುತ್ತಿಲ್ಲ , ದಯ ಮಾಡಿ ನನ್ನ ಒಂದು ಕೋರಿಕೆ ನಡೆಸಿ ಕೊಡು , ನೀನು ಮುತ್ತೈದೆ ಆದ್ದರಿಂದ ಅರಿಶಿನ ಕುಂಕುಮ ತೆಗೆದು ಕೊಲ್ಲದೆ ಇಲ್ಲಿಂದ ಹೋಗುವಂತಿಲ್ಲ , ನಾನು ಬಂದು ಕುಂಕುಮ ಕೊಡುವ ತನಕ ಹೊಸ್ತಿಲ ದಾಟ ಬೇಡ , ಇದೊ ಈಗ ಬಂದೆ ಅರಿಶಿನ ಕುಂಕುಮ ತೆಗೆದುಕೊಂಡು ಹೋಗು'' ಎಂದು ಹೇಳಿ ಒಳ ಹೋದಳು
ಒಳಗೆ ಹೋದ ನಂತರ ಯೋಚಿಸುತ್ತಾಳೆ ನಾನು ಕುಂಕುಮ ಕೊಟ್ಟರೆ ಮಾತ್ರ ಇಲ್ಲಿಂದ ಹೊರತು ಹೋಗುತ್ತಾಳೆ , ಆಮೇಲೆ ನನ್ನ ಗಂಡನ ಮನೆ ದಟ್ಟ ದರಿದ್ರ ವಾಗುತ್ತೆ ಹೋದ ಮನೆಗೆ ಒಳ್ಳೆ ಹೆಸರು ತರ ಬೇಕು ಎಂದು ಅಪ್ಪ ಅಮ್ಮ ಹೇಳ್ತಾ ಇದ್ದರು ಹಾಗಾಗಿ ನಾನು ಪ್ರಾಣ ತ್ಯಾಗ ಮಾಡಿ ತಾಯಿ ಲಕ್ಷ್ಮಿ ಇಲ್ಲೇ ಇರುವಂತೆ ಮಾಡುತ್ತೇನೆ ಎಂದವಳೇ ಹಿತ್ತಲಿನಲ್ಲಿದ್ದ ಬಾವಿಗೆ ಹಾರಿ ಪ್ರಾಣ ತ್ಯಾಗ ಮಾಡಿದಳು. ಇತ್ತ ಲಕ್ಷ್ಮಿ ಎಷ್ಟು ಹೊತ್ತಾದರೂ ಅಕ್ಕ ಬಾರದ್ದರಿಂದ ಮತ್ತೆ ಮನೆಯ ಒಳಗೆ ಹೋಗಿ ಅಲ್ಲೇ ಶಾಶ್ವತ ವಾಗಿ ನೆಲೆಸಿದಳು . ಅಕ್ಕನ ಜಾಣ ತನ ದಿಂದ ಅವಳ ಗಂಡನ ಮನೆಯಲ್ಲಿ ಲಕ್ಷ್ಮಿ ಶಾಶ್ವತವಾಗಿ ಉಳಿದಳು ಎಂಬಲ್ಲಿಗೆ ಅರಿಶಿನ-ಕುಂಕುಮ ಕೊಡುವ ಪದ್ಧತಿ ಜಾರಿಯಾದ ಈ ಸುಂದರ ಕಥೆ ಇಲ್ಲಿಗೆ ಮುಕ್ತಾಯ ವಾಯಿತು.

Tuesday, May 26, 2015

kavyamayee: ಮುಂದೇನು ???

kavyamayee: ಮುಂದೇನು ???: ನಾಳೆ ಏನಾಗುವುದು ಎಂದು ಯಾರೂ ಅರಿಯರು  ಇಂದು ಏನಾಗುವುದು ಎಂಬ ಕುರುಹು ಅರಿಯರು  ಇಂದು-ನಾಳೆಗಳ ಮಧ್ಯೆ ಮುಂದಿನ ಜೀವನ ಅಗೋಚರ !  ಸೀತಾ ಮಾತೆಯಂತಹವರ...

Monday, May 25, 2015

ಮುಂದೇನು ???







ನಾಳೆ ಏನಾಗುವುದು ಎಂದು ಯಾರೂ ಅರಿಯರು 
ಇಂದು ಏನಾಗುವುದು ಎಂಬ ಕುರುಹು ಅರಿಯರು 
ಇಂದು-ನಾಳೆಗಳ ಮಧ್ಯೆ ಮುಂದಿನ ಜೀವನ ಅಗೋಚರ ! 

ಸೀತಾ ಮಾತೆಯಂತಹವರೆ ತನ್ನ ಬದುಕು ಕಾಡಿನಲ್ಲಿ 
ಅದು ಕೂಡ ತುಂಬು ಗರ್ಭಿಣಿಯನ್ನು ಶ್ರೀ ರಾಮಚಂದ್ರ 
ಕಾಡಿಗಟ್ಟ ಬಹುದು ಎಂಬ ಒಂಚೂರು ಸುಳಿವು ಇಲ್ಲದೆ
ದಿಕ್ಕೇ ತೋಚದದವಳಂತೆ ತನ್ನ ಬಸಿರು-ಬಾಣಂತನ ವನ್ನು 
ಶ್ರೀ ವಾಲ್ಮೀಕಿ ಗಳ ಆಶ್ರಮದಲ್ಲಿ ತನ್ನ ಮಕ್ಕಳ 
ಲಾಲನೆ-ಪಾಲನೆ ಪೋಷಣೆಯಲ್ಲಿ 
ಲವ-ಕುಶರೀರ್ವರ ಜೊತೆ ಕಳೆದಳು 

ದ್ರುಪದನ ಮಗಳು ದ್ರೌಪದಿ ಸಹಾ ತಾನು 
ಪಂಚ-ಪಾಂಡವರ ಒಬ್ಬಳೇ ಮಡದಿ ಆಗುತ್ತೇನೆಂದು 
ಕನಸು-ಮನಸ್ಸಿನಲ್ಲೂ ಅರಿತವಳಲ್ಲ ಪಾಪ 
ಪೌರಾಣಿಕ ಯುಗದಲ್ಲೂ ಕುರುಹು ನೀಡದ 
ಇಂದು-ನಾಳೆಗಳು ನಮಗೆಲ್ಲಿಯ ಮುನ್ಸೂಚನೆ ನೀಡುತ್ತದೆ?
ಆದ್ದರಿಂದ ಇಂದು-ಇಂದಿಗೆ; ನಾಳೆ-ನಾಳೆಗೆ 
ಮುಂದು ಸಹಾ ನಮ್ಮದೇ ಎಂದು 
ಶಾಂತ-ಚಿತ್ತತೆ ಇಂದ 'ಜೀವನವ' 
ಜೀವ ಇರುವವರೆಗೂ ಸವೆಸಬೇಕು !
ಇದುವೇ ಜೀವ ; ಇದು ಜೀವನ


ಚಮ್ಮಾರನ ಲೆಕ್ಕಾಚಾರ








ಚಪ್ಪಲಿ ಹೊಳೆವ ಚಮ್ಮಾರ 
ಮನದಲ್ಲಿ ಹಾಕಿದ  ಲೆಕ್ಕಾಚಾರ 
ತನ್ನ ಕಸುಬು ತನಗಷ್ಟೇ ವಿಚಾರ 
ನನ್ನ ಮಗನಿಗ್ಯಾಕೆ ಈ ಆಚಾರ 
ಅವನಾದರೂ ಅಗಲಿ ಸದಾಚಾರ 
ವಿದ್ಯೆಯ ಕಲಿವ ಸಮಾಚಾರ 
ದೊಡ್ಡ ಪದವಿ ಪಡೆವ ಸುವಿಚಾರ 
ಆಗಲಾದರೂ ಆಗಲಿ ತನ್ನ ಸಂಸಾರ 
ಸುಖದ ಸುಪ್ಪತ್ತಿಗೆಯ ಆಗರ 
ದೇವ ನೀಡೋ ನೀ ಅಕ್ಕರ 
ನಿನ್ನ ಪ್ರೀತಿಯ ಹಾಲೋಗರ
ಅದನುಂಡ ನಾವು ಈಜುವೆವು 
ಸಂಸಾರ ಸಾಗರ ಸಾಗರ ಸಾಗರಾ


Thursday, May 21, 2015

ಕಪ್ಪು ಹಣ !





ಈ ಕಪ್ಪು ಹಣ ಹೊಂದಿರುವವರ ಬಗ್ಗೆ ತುಂಬಾ ಕೇಳಿದ್ದೇವೆ.  ಶ್ರೀಮಂತರಲ್ಲಿ ಕಪ್ಪು ಹಣ ಯಾಕೆ ಇರುತ್ತೆ  ??  ಅವರ ಹಣ ಯಾಕೆ ಕಪ್ಪು ಬಣ್ಣದ್ದಾಗಿರುತ್ತದೆ ಎಂದು ಎಷ್ಟೋ ವರುಷಗಳ ಹಿಂದೆ ನನ್ನ ಮಗ ಪುಟ್ಟವನಾಗಿದ್ದಾಗ  ಕೇಳುತ್ತಿದ್ದ .  ಅಗ  ನಾನು ಅವನಿಗೆ ಅರ್ಥ ವಾಗುವಂತೆ ಹೇಳಲು ಪ್ರಯತ್ನ  ಪದುತ್ತಿದ್ದೆ.  ಆದರೂ ಅವನಿಗೆ ನನ್ನ ಉತ್ತರ ಅಷ್ಟೊಂದು ಕ್ಲಿಯರ್ ಇರ್ತಾ ಇರಲಿಲ್ಲ .  ಅದೇ ವಿಷಯದ ಬಗ್ಗೆ ಮಾತಾಡ್ತಾ ಹಳೆಯದನ್ನು ಮೆಲುಕು ಹಾಕ್ತಾ ಇದ್ದೆವು.

ನಿನ್ನೆ ಹೀಗೆ ಮಾತಾಡ್ತಾ ನನ್ ಮಗ ಹೇಳ್ತಾ ಇದ್ದ ''ಅಮ್ಮ ನಮ್ ನೋಟ್ಸ್ (ಇಂಡಿಯನ್ ಕರೆನ್ಸಿ ) ಮೇಲೆ ಎಕ್ಷ್ ಪಾಯ್ರಿ ಡೇಟ್ಸ್ ಇದ್ದಿದ್ದರೆ 

ಬಹುಷಃ ಯಾರೂ ಸಹ ದುಡ್ಡನ್ನ ಕೋಟಿ ಕೋಟಿ ಕೂಡಿಡ್ತಾ ಇರ್ಲಿಲ್ಲ , ಕಪ್ಪು ಹಣ ಹೊಂದಿರ್ತಿರ್ಲಿಲ್ಲ ಆಲ್ವಾ ಅಂದ smile emoticon ನನಗೆ ಹಾ !! ಹೌದಲ್ಲ 

ನಮ್ ಸರ್ಕಾರಕ್ಕೆ ಇದ್ ಯಾಕೆ ಹೊಳಿಲಿಲ್ಲ ಅನ್ನಿಸ್ತು. ಭೇಷ್ ಕಣೋ ಮಗನೆ ಅಂತ ಅವನ ಬೆನ್ನು ತಟ್ಟಿದೆ like emoticon ಹೌದು ನೋಟ್ಸ್ ಗಳು ಎಕ್ಷ್ 

ಪೈರ್ಯ್ ಆದ್ರೆ ಹಳೆ ಹರಿದ ನಂಬರ್ ಮಾಸಿದ ನೋಟ್ಸ್ ಗಳ ಚಲಾವಣೆಗೆ ಪಿರಿ ಪಿರಿ ಉಂಟಾಗುವುದಿಲ್ಲ. ಅಟ್ ಲೀಸ್ಟ್ ೫-೧೦ ಇಯರ್ಸ್ 

ಇದ್ದರೆ ಒಳ್ಳೆಯದು like emoticon












''ಅತಿಥಿ ದೇವೋ ಭವ ''



ನನ್ನ ನೆನಪಿನಂಗಳದಿಂದ ೭ ::

ನಾವೆಲ್ಲಾ ಶಾಲೆಯಲ್ಲಿ ಓದುತ್ತಿರುವಾಗ ಹಿರಿಯರು ಯಾರೇ ಮನೆಗೆ ಬರಲಿ ನಮ್ಮ ತಂದೆ ನಮ್ಮನ್ನೆಲ್ಲ ಅವರಿಗೆ ಪರಿಚಯಿಸುತ್ತಿದ್ದ ರೀತಿಯೇ ಎಷ್ಟು ಅದ್ಭುತ ಗೊತ್ತೇ .  ಯಾರಾದ್ರೂ    ಪರಿಚಯಸ್ತರು, ಅಪ್ಪನ ಸ್ನೇಹಿತರು  ಮನೆಗೆ ಬಂದಾಗ ನಮ್ಮಮ್ಮನನ್ನು ಲಕ್ಷ್ಮಿ ಇಲ್ಲಿ ಸ್ವಲ್ಪ ಬಾ ಎಂದಾಗ  ಅಮ್ಮ ಮೈ ತುಂಬಾ ಸೆರಗು ಹೊದ್ದು ಪಡಸಾಲೆಗೆ ಹೋಗಿ ನಿಲ್ಲುತ್ತಿದ್ದರು.  ಅಗ ನಮ್ ತಂದೆ ಬಂದವರಿಗೆ ''ಈ ಕೆ ನನ್ನ ಧರ್ಮ ಪತ್ನಿ ಎಂದು ಪರಿಚಯಿಸುತ್ತಿದ್ದರು ಆಗ ಅಮ್ಮ ಬಂದವರಿಗೆ ಕೈ ಜೋಡಿಸಿ ನಮಸ್ತೆ ಎಂದು ಪ್ರತಿಕ್ರಿಯಿಸುತ್ತಿದ್ದರು.  ನಂತರ ಮಕ್ಕಳನ್ನು ಕರೆಯಲು ಅಮ್ಮನಿಗೆ ಹೇಳುತ್ತಿದ್ದರು ಅಮ್ಮ ನಮ್ಮನ್ನು ಅಪ್ಪ ಕರೆಯುತ್ತಿದ್ದಾರೆ ಎಂದಾಗ ನಾವು ಹೊರಗಡೆ ಪಡಸಾಲೆಗೆ ಬಂದು ಸಾಲಾಗಿ ನಿಲ್ಲುತ್ತಿದ್ದೆವು.  ಆಗ ಅಪ್ಪ ಅವರಿಗೆ ನಮ್ಮನ್ನೆಲ್ಲ ಹೆಸರು ಹೇಳಿ ನಾವು ಏನು ಓದುತ್ತಿದೇವೆ ಎಂದು ನಮ್ಮ ಬಾಯಿಂದ ಕೇಳಿ ತಿಳಿಸುತ್ತಿದ್ದರು.  ನಂತರ ''ಆಯಿತು ಮಕ್ಕಲ್ಲೇ ಈಗ ಎಲ್ಲರು ಒಳಗೆ ಹೋಗಿ ಓದಿ ಕೊಳ್ಳಿ ಎಂದು ಹೇಳಿ ನಮ್ಮನ್ನ ಒಳಗೆ ಕಳುಹಿಸಿ ಅವರು ಸ್ನೇಹಿತರೊಡನೆ ಲೋಕಾಭಿರಾಮವಾಗಿ ಮಾತನಾದುವಷ್ಟರಲ್ಲಿ ಅಮ್ಮ ಅವರಿಗೆ ಉಪ್ಪಿಟ್ಟು ಕಾಫಿ ತಯಾರಿಸಿ ಬಂದವರಿಗೆ ಆತಿಥ್ಯ ನೀಡಿಯೇ ಕಲುಹಿಸುತ್ತಿದ್ದರು.  ಯಾರೇ ಮನೆಗೆ ಬಂದರೂ ಅವರಿಗೆ ಏನಾದರೂ ನೀಡಿ ಕಡೆ ಪಕ್ಷ ಒಂದು ಲೋಟ ಕಾಪಿ ಕೊಟ್ಟೆ ಕಳುಹಿಸ ಬೆಕು.  ಬಂದವರನ್ನು ಹಾಗೆ ಕಳುಹಿಸ ಬಾರದು ಎಂದು ನಮ್ಮ ತಂದೆ-ತಾಯಿ ನಮಗೆ ಕಲಿಸಿ ಕೊಟ್ಟ ಪಾಠ ನಾವು ಈಗಲೂ ನಡೆಸಿ ಕೊಂಡು  ಬರುತ್ತಿದ್ದೆವೆ.  ಬಂದವರನ್ನ ಹಾಗೆ ಕಳುಹಿಸಬಾರದು ಅವರು ಸಂಕೋಚದಿಂದ ಬೇಡ ಅಂದರೂ ನಮ್ಮ ಆತಿಥ್ಯ ನೀಡಿ ಅವರನ್ನು ಸತ್ಕರಿಸಬೇಕು ಎಂದು ಅಪ್ಪ ಅಮ್ಮ ಹೇಳ್ತಾ ಇದ್ದದ್ದು ಈಗಲೂ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿದೆ.  ಆದರೆ ಇತ್ತೀಚಿಗೆ ಈ ರೀತಿ ಆತಿಥ್ಯ ಅತಿ ವಿರಳ ಎನ್ನ ಬಹುದು.  ಕೆಲವರಂತೂ  ಗೇಟಿನಲ್ಲಿ ಮಾತನಾಡಿಸಿ ಸಾಗ ಹಾಕುತ್ತಾರೆ.  ಮತ್ತೆ ಕೆಲವರು ಮಾತಿನಲ್ಲಿಯೇ ಹೊಟ್ಟೆ ತುಂಬಿಸಿ ಕಳುಹಿಸುತ್ತಾರೆ.  ಮತ್ತೂ  ಕೆಲವರು ಕಾಪಿ ಆಯ್ತಾ, ತಿಂಡಿ ಆಯ್ತಾ, ಎಂದು ಬಾಗಿಲಿನಲ್ಲಿ ವಿಚಾರಿಸಿ ಸಾಗ ಹಾಕುತ್ತಾರೆ.  ''ಅತಿಥಿ ದೇವೋ ಭವ '' ಅನ್ನೋರು ಹಿಂದಿನ ಕಾಲದ ಸುಸಂಸ್ಕೃತ ಜನ.  ಆದರೆ ಈಗೆಲ್ಲಾ  ''ಅತಿಥಿ ದೆವ್ವೊ  ಭವ '' ಆಗಿ ಹೋಗಿ ಬಿಟ್ಟಿದೆ.  ಯಾಂತ್ರಿಕ ಬದುಕಿನಲ್ಲಿ ಈಗಿನ ಜನ ಪಾಪ ತಮ್ಮದೇ ತಮಗೆ ಅಂದು ಕೊಳ್ಳುತ್ತಿರುತ್ತಾರೆ ಇನ್ನು ಬಂದು ಹೋಗುವವರಿಗೆ ಮಾಡಿ ಹಾಕುವುದು ಅವರಿಗೂ ಕಷ್ಟ !!   ಹಿಂದೆಲ್ಲಾ ಪಾಪ ಅಮ್ಮ ಹಸಿ ಸೌದೆ , ಬೆರಣಿ , ಇಟ್ಟು ಊದುಕೊಳವೆ ಇಂದ ಊದಿ ಊದಿ ಓಲೆ ಹೊತ್ತಿಸಿ ೭-೮ ಜನರ ಅಡುಗೆ ಮಾಡುವುದಲ್ಲದೆ ಬಂದು ಹೋಗುವ ಅತಿಥಿಗಳನ್ನು ನಗು ಮೊಗದಿಂದ ಸ್ವಾಗತಿಸಿ ಅವರ  ಸತ್ಕಾರ ಮಾಡಿ ಅಪ್ಪನಿಂದ ಕೂಡ ಭೇಷ್ ಅನ್ನಿಸಿಕೊಳ್ಳುತ್ತಿದ್ದರು.  ಈಗ ಗಂಡ ಯಾರಾದರು ಒಬ್ಬ ಸ್ನೇಹಿತನನ್ನೋ , ನೆಂಟನನ್ನೋ  ಕರೆದು ಕೊಂಡು ಬಂದರೆ ಹೆಂಡತಿ ''ರೀ ಸ್ವಲ್ಪ ಇಲ್ಲಿ ಬರ್ತೀರಾ ಎಂದು ಅಡುಗೆ ಕೋಣೆಗೆ ಕರೆದು ಆಫೀಸ್ ನಿಂದ ಬಂದು ಸುಸ್ತಾಗಿ ಒಂದು ಲೋಟ ಕಾಫಿ ಕುಡಿದು ಟಿವಿ  ನೋಡ್ತಾ relaax  ಮಾಡೋಣ ಅಂದ್ರೆ ಇದ್ಯಾರೋ ವಕ್ಕರಿಸಿ ಕೊಂಡರು ಯಾರ್ರೀ  ಇದು , ಇದೆ ಕೊನೆ ಇನ್ನೊದು ಸಾರಿ ಯಾರನ್ನದ್ರೂ ಕರೆದು ಕೊಂಡು ಬಂದ್ರೆ ನಾನೇ ಹೋಟೆಲ್ಗೆ  ಹೋಗಿ ಕಾಫಿ ಕುಡ್ಕೊಂಡು ಬರ್ತೇನೆ , ನೀವೇ ಅವರಿಗೆ ಕಾಫಿ ಮಾಡಿ ಕುಡ್ಸಿ '' ಎಂದು ಗೊಣಗಿ ಕೊಂಡು ಕಾಫಿ ಲೋಟ ತಂದು ಸ್ನೇಹಿತನ ಮುಂದೆ ಕುಕ್ಕುತ್ತಾಳೆ.   ಆತ ಇನ್ನೆಂದೂ ಇವರ ಮನೆ ಕಡೆ ತಲೆ ಹಾಕಿ ಮಲಗ ಬಾರದು.  ಇದು ''ಅತಿಥಿ ದೆವ್ವೊ  ಭವ '' ಅಲ್ಲದೆ ಇನ್ನೇನು ಹೇಳಿ ??

Tuesday, May 19, 2015

ನನ್ನ ನೆನಪಿನಂಗಳದಿಂದ 6




ನನ್ನ ನೆನಪಿನಂಗಳದಿಂದ 6 ::

ನನ್ನ ಸ್ಮೃತಿ ಪಟಲದ ಪುಟಗಳನ್ನ ತಿರುವಿ ಹಾಕುತ್ತಿರುವಾಗ ಮತ್ತೊಂದು ಘಟನೆ ನೆನಪಾಯಿತು.  ಅದೇನಪ್ಪ ಅಂದ್ರೆ ಆಗೆಲ್ಲ ಈಗಿನ ಹಾಗೆ ೩-೪ ವರುಷ ಗಳಿಗೆಲ್ಲ ಡೇ ಕೇರ್ ,  L K G - U K G ಇವೆಲ್ಲಾ ಇರುತ್ತಲೇ ಇರಲಿಲ್ಲ.    ನಾವಿನ್ನು ಅಮ್ಮನ ತೋಳಿನಲ್ಲಿ ಬೆಳೆಯುತ್ತಿದ್ದೆವು, ಅಕ್ಕ ಅಣ್ಣಂದಿರು ಮುದ್ದಿನಲ್ಲಿ,  ಅಪ್ಪ - ಅಮ್ಮನ ತೋಳಿನಲ್ಲಿ ಅದೆಷ್ಟು ಆನಂದ ಕಂಡಿದ್ದೇವೆ .  ಈಗಿನ ಮಕ್ಕಳನ್ನು ೩ ವರ್ಷಕ್ಕೆಲ್ಲಾ ಬೇಬಿ ಸಿಟ್ಟಿಂಗ್ , ನಂತರ ಎರಡೆರಡು KG  ಪಾಸಾದ ನಂತರ ಮೊದಲನೇ ತರಗತಿ ಗೆ ಸೇರಿಸಿಕೊಳ್ಳುತ್ತಾರೆ.  ನಾವೆಲ್ಲಾ ಒಂದೇ ಸಲ ಮೊದಲನೇ ತರಗತಿ ಗೆ ಸೇರಿದ್ದು .  ಸ್ಲೇಟು ಬಳಪ ಅಷ್ಟೇ ಹಿಡಿದು ಶಾಲೆಗೇ ಹೊಗುತ್ತಿದ್ದೆವು.  ಸಮ ವಸ್ತ್ರ ನೀಲಿ ಬಣ್ಣದ ಲಂಗ ಬಿಳಿ ಬ್ಲೌಸ್ ತೊಟ್ಟರೆ ಅಷ್ಟೇ ಸಾಕು . ಸರ್ಕಾರಿ ಶಾಲೆ ಆದುದರಿಂದ ಉಚಿತ ಪ್ರವೇಶ ಇತ್ತು.  ಈಗಿನ ಮಕ್ಕಳಿಗೆ L K G - U K Gಗಳಿಗೆ ಒಳ್ಳೆ ಶಾಲೆಗೇ ಸೇರಿಸಲು ಲಕ್ಷ ಲಕ್ಷ ತೆ ರ ಬೆಕಾಗುತ್ತದೆ.  ಈಗ ವಿಧ್ಯಾಭ್ಯಾಸ ಮಾರುಕಟ್ಟೆಯಲ್ಲಿ ಮಾರಾಟ ಆಗುವ ವಸ್ತುವಿನಂತೆ ,  ಪೋಷಕರು  ಒಳ್ಳೆ ಶಾಲೆಗಳನ್ನ  ಹುಡುಕಿ ಹುಡುಕಿ ಅದರ ಬಗ್ಗೆ ಅವರಿವರಿಂದ ತಿಳಿದು ಕೊಂಡು ನಂತರ ಮಕ್ಕಳನ್ನು ಶಾಲೆಗೆ ಸೆರಿಸುತ್ತರೆ.  ಮತ್ತೆ ಅವರಿಗೆ ಶಾಲಾ ವಾಹನದ ವ್ಯವಸ್ತೆ ಮಾಡಬೇಕು.  ತದ ನಂತರ ಪೋಷಕರಿಬ್ಬರೂ ದುಡಿಯುತ್ತಿದ್ದರೆ ಇನ್ನೊ೦ದು ರೀತಿ ಪೀಕಲಾಟ ಮಕ್ಕಳನ್ನು ಒಳ್ಳೆ ಬೇಬಿ ಸಿಟ್ಟಿಂಗ್ ಹುಡುಕಿ ಅವರ ಕೇರ್-ಟೆಕರ್ಸ್ ಬಗ್ಗೆ ಗಮನ ಇಡ ಬೆಕು.  ಒಂದಾ ಎರಡಾ ಈಗಿನ ಮಕ್ಕಳ ಸಮಸ್ಯೆ ಹೇಳ ತೀರದು. ನಮ್ಮ ಕಾಲದಲ್ಲಿ ಈ ರೀತಿ ಅತ್ಯಾಚಾರ -ದುರಾಚಾರ ಇರಲಿಲ್ಲ.  ನಾವೆಲ್ಲ ೪-೫ ಮೈಲಿಗಳನ್ನು ನಡೆದು ಕೊಂಡೆ ಹೋಗಿ ನಡೆದು ಕೊಂಡೆ ಬರುತ್ತಿದ್ದೆವು.  ಸ್ನೇಹಿತೆಯರೊಡನೆ ಮಾತನಾಡುತ್ತ ಶಾಲೆಗೆ ಹೊರಡುವುದೇ ಒಂದು ಸಡಗರ.  ಅವರು ರೆಡಿ ಯಾಗಿ ನಮ್ಮ ಮನೆ ಮುಂದೆ  ಬಂದು ಕರೆಯುತ್ತಿದ್ದರು ಅಗ ಅಮ್ಮನಿಗೆ ''ಅಮ್ಮ ಹೋಗಿ ಬರ್ತೀವಿ'  ಎಂದು ಹೇಳದೆ ಹೊರಗಡೆ ಗೆ ಅಡಿ ಇಟ್ಟಿದ್ದೆ ಇಲ್ಲ.  ಅದು ನಮ್ಮ ಮನೆಯಲ್ಲಿ ಚಿಕ್ಕಂದಿನಿಂದ ಎಲ್ಲಿಗೇ ಹೊರಟರು ಎಲ್ಲರಿಗು ಹೇಳಿ ಹೋಗುವ ಪದ್ಧತಿ.  ಅಮ್ಮ ಹೋಗ್ಬರ್ತೀನಿ, ಅಪ್ಪ ಹೋಗ್ಬರ್ತೀನಿ ಇದು ವಾಡಿಕೆ.  ಅರೆರೆ ಇದೇನು ನಾನು ನನ್ನ ಬಾಲ್ಯದ ಬಗ್ಗೆ ಮಾತನಾಡುತ್ತ ಮಾತನಾಡುತ್ತ ನನ್ನನ್ನು ಶಾಲೆಗೆ ಸೇರಿಸಿದ ದಿನವನ್ನು ಹೇಳುವುದೇ ಮರೆತೇ ಬಿಟ್ಟೆ .  ಸರಿ ನನಗಾಗ ಆರು  ವರುಷ ಶಾಲೆಗೆ ಸೇರಿಸುವ ದಿನ  ಬಂದೆ ಬಟ್ಟಿತು !!  ಅಮ್ಮ ದೇವರ ಮುಂದೆ ನನಗೆಂದು ತಂದ ಹೊಸ-ಬಳಪ ಸ್ಲೇಟು ಅನ್ನು ಇಟ್ಟು , ಮೊದಲಿಗೆ '' ಶುಕ್ಲಾಂ  ಬರದರಂ ವಿಷ್ಣುಂ  ಶಶಿವರಣಂ ಚತುರ್ಭುಜಂ  ಪ್ರಸನ್ನ ವದನಂ ಧ್ಯಾಯೇತ್  ಸರ್ವ ವಿಜ್ನೋಪ  ಶಾಂತಯೇ'' ,  ''ಸರಸ್ವತಿ ನಮಸ್ತುಬ್ಯಂ ವರದೇ ಕಾಮ ರೂಪಿಣಿ ವಿದ್ಯಾರಂಭಂ ಕರಿಶ್ಯಾಮಿ  ಸಿದ್ಧಿರ್ ಭವತು ಮೇ ಸದಾ'' , ವಕ್ರ ತುಂದ ಮಹಾ ಕಾಯ  ಸೂರ್ಯ ಕೋಟಿ   ಸಮ ಪ್ರಭ  ನಿರ್ವಿಘ್ನಂ  ಕುರುಮೆ ದೇವ ಸರ್ವ ಕಾರ್ಯೇಷು ಸರ್ವದಾ ''  ಈ ಶ್ಲೋಕಗಳನ್ನು  ನನ್ನಿಂದ ಹೇಳಿಸಿ,  ''ಒಳ್ಳೆ ವಿದ್ಯಾ ಬುದ್ದಿ ಕೊಡಪ್ಪ ದೇವ್ರೇ''  ಎಂದು ತಾನು ನನ್ನೊಂದಿಗೆ ಬೇಡಕೊಂಡರು  ಅಮ್ಮ . ಮತ್ತೆ ಶಾರದೆ , ಗಣಪತಿ ಫೋಟೋ ಮುಂದೆ ಕೂರಿಸಿ ಕೊ೦ಡು '''ಅ  ಆ  ಇ  ಈ ''  ಬರೆದು ಕೊಟ್ಟು ತಿದ್ದಿಸಿದರು.  ಎಲ್ಲಾ ಬಾಯಿ ಪಾಠ ಹೇಳಿಕೊಟ್ಟಿದ್ದರು .  ಖುಷಿ ಇಂದ ಶಾಲೆಗೇ ಸೇರಿಸಿ ಬಂದರು.   ಆಗ ನಮ್ಮ ಶಾಲೆಯಲ್ಲಿ ಶ್ರೀ ರಾಮಮೂರ್ತಿ ಸರ್ ಅಂತ ಇದ್ದರು ಅವರು ಒಂದರಿಂದ  ಏಳನೇ ತ ರಗತಿಯವರಿಗೂ ಕ್ಲಾಸೆಸ್ ತೆಗೆದುಕೊಳ್ಳುತ್ತಿದ್ದರು.  ಮೊದಲ  ದಿನ ನನ್ನನ್ನು ಶಾಲೆಗೇ ಸೇರಿಸಿದಾಗ ರಾಮ ಮೂರ್ತಿ ಸರ್ ನನ್ನನ್ನು ಎತ್ತಿಕೊಂಡು ಹೋಗಿ  ಕುಳ್ಳಿರಿಸಿದರು.  ಅದ್ಯಾಕೋ ಅವರು  ನನ್ನನ್ನು ತುಂಬಾ ಇಷ್ಟ  ಪಡುತ್ತಿದ್ದರು.    ನಮ್ಮ  ಶಾಲೆಯಲ್ಲಿ ಇನ್ನೊಬ್ಬರು ಗಿರಿಜಾ ಟೀಚರ್ ಅಂತ ಇದ್ದರು.  ಅವರು  ರಾಮ  ಮೂರ್ತಿ  ಸರ್  ಹೆಂಡತಿ ಎಂದು  ನನ್ನ ಅಣ್ಣಂದಿರು  ಅಪ್ಪ ಅಮ್ಮನಿಗೆ  ಹೇಳುತ್ತಿದ್ದರು.  ಅವರಿಬ್ಬರೂ  ಸಹ ಶಾಂತ ಸ್ವಭಾವ ದವರಾಗಿದ್ದು ಶಾಲೆಯ ಮಕ್ಕಳನ್ನು  ತಮ್ಮ ಸ್ವಂತ  ಮಕ್ಕಳಂತೆ  ಅಕ್ಕರೆ ಇಂದ ನೋಡಿ ಕೊಳ್ಳುತ್ತಿದ್ದರು.   ನಾನು ಬಾಲ್ಯದಲ್ಲಿ  ಮುದ್ದು ಮುದ್ದಾಗಿ ಬೆಳ್ಳಗೆ ಇದ್ದೆ.    ನಮ್ಮ ರಾಮ ಮೂರ್ತಿ  ಸರ್ ದಂಪತಿಗಳಿಗೆ ಮಕ್ಕಳಿರಲಿಲ್ಲವಂತೆ.   ಹಾಗಾಗಿ ಅವರು  ಶಾಲೆ  ಮುಗಿದ ನಂತರ ನನ್ನನ್ನು ಅವರ  ಮನೆಗೆ ಕರೆದು ಕೊ೦ಡು ಹೋಗಿ ಬಿಡುತ್ತಿದ್ದರು.    ಅವರ ಮನೆಯಲ್ಲೇ ಊಟ  ತಿಂಡಿ ಎಲ್ಲಾ ಕೊಡುತ್ತಿದ್ದರು.    ತುಂಬಾ ಪ್ರೀತಿ ಇಂದ  ಮುದ್ದಾಗಿ ನೋಡಿ ಕೊಳ್ಳುತ್ತಿದ್ದರು.   ರಾಮ ಮೂರ್ತಿ ಸರ್ ಯಾವಾಗಲು ಹೇಳುತ್ತಿದ್ದರು  '' ನಿಮ್ಮ ಅಮ್ಮನಿಗೆ ಮನೆ ತುಂಬಾ ಮಕ್ಕಳು ನಮ್ಮ ಮನೆಯಲ್ಲಿ ಮಕ್ಕಳೇ ಇಲ್ಲ ನೀನು ನಮ್ಮ ಮನೆಯಲ್ಲೇ ಇದ್ದು ಬಿಡು  ಅಂತ ''   ಇನ್ನು ತಮಾಷೆ ಅಂದರೆ ಅವರು ಒಮ್ಮೆ ನಮ್ಮ ಮನೆಗೆ ಬಂದು ನಮ್ಮ ಅಪ್ಪ ಅಮ್ಮನನ್ನು  ಸಹಾ ಕೇಳಿ ಕೊಂಡರಂತೆ ಪಾಪ ಸರ್ ಗೆ  ನನ್ನ   ಕಂಡರೆ ತುಂಬಾ  ಪ್ರೀತಿ.    ಆ  ಕಾಲದಲ್ಲಿ ಸ್ವಲ್ಪ ಸ್ತಿತಿವನ್ತರಷ್ಟೇ ಹಾರ್ಲಿಕ್ಸ್ , ಒವಲ್ಟೇನ್ ,  ವಿವಾ  ಇದನ್ನೆಲ್ಲಾ ಮ ಕ್ಕಳಿಗೆ ಹಾಲಿಗೆ ಹಾಕಿ  ಕುಡಿಯಲು ಕೊಡು ತ್ತಿದ್ದರು.   ಆದರೇ ನಮ್ಮ ಮನೆಯಲ್ಲಿ ಮನೆ ತುಂಬಾ ಮಕ್ಕಳು ಅಮ್ಮ  ಒಂದು ಪಾವು ಹಾಲಿಗೆ ಒಂದು ಪಾವು ನೀರು ಬೆರೆಸಿ  ನಮಗೆಲ್ಲ ಟೀ ಮಾಡಿ ಕೊಡುತ್ತಿದ್ದರು.   ನಂತರ ನಮಗೆಲ್ಲಾ ಕೊಟ್ಟ ಮೇಲೆ ಅವಳಿಗೆ ಏನೂ ಉಳಿಯುತ್ತಿರಲಿಲ್ಲ ಅಗಾ ಟೀ ಸೊಪ್ಪಿನ ಮೇಲೆ ಮತ್ತೊಂದಿಷ್ಟು ನೀರು ಹಾಕಿ ಕುದಿಸಿ ತಾನು ಕುಡಿಯುತ್ತಿದ್ದರು   ನಾನು ರಾಮ ಮೂರ್ತಿ  ಸರ್ ದಂಪತಿ ಗಳಿಂದ ಪ್ರೀತಿ  ಪಡೆಯುವುದರ ಜೊತೆ ಜೊತೆಗೆ ಹಾಲು,  ತುಪ್ಪ,ಒಳ್ಳೊಳ್ಳೆ ಊಟ ತಿಂಡಿ, ಕುರುಕಲು  ಎಲ್ಲ ತಿಂದುಂಡು ಗುಂಡು ಗುಂಡಾಗಿದ್ದೆ.   ನನ್ನ ಆಟ ಆಟ ನೋಡಿ ಖುಷಿ ಪಡುತ್ತಿದ್ದರು ಸಿರ್.  ಅವರ ಮನೆ ಇಂದ ಕರೆದೊಯ್ಯಲು ನನ್ನ  ಅಣ್ಣ ಅಕ್ಕ ಬಂದು ಸರ್  ಕಳುಹಿಸಿ ಕೊಡಿ ಎಂದು ಕೇಳಿದರೆ ಸರ್ ಮತ್ತೆ ಗಿರಿಜಾ ಮಿಸ್ ಹ್ಯಾಪ್ ಮೊರೆ ಹಾಕಿ ಕೊಂಡು ಕಳುಹಿಸುತ್ತಿದ್ದರು .    ಭಾನುವಾರ ಬಂತೆಂದರೆ ಶಾಲೆ ಇಲ್ಲ ಆದರೆ ನನ್ನ ಸರ್ ದಂಪತಿಗಳು  ಲಾಲ್ ಬಾಗ್ , ಕಬ್ಬನ್ ಪಾರ್ಕ್ ಗೆ ಕರೆದೊಯ್ಯುತ್ತಿದ್ದರು ಅಲ್ಲಿ  ಬಲೂನ್ , ಅವರು ಕಡಲೆಕಾಯಿ ತಿನ್ನುತ್ತ ನಂಗೆ  ಐಸ್ ಕ್ರೀಮ್ ಕೊಡಿಸುತ್ತಿದ್ದರು.   ನನಗೋ ಮಜವೋ ಮಜಾ.    ನಾನು ನಾಲಕ್ಕು  - ಐದನೇ  ತರಗತಿಗೆ ಬರುವ ವೇಳೆಗೆ ರಾಮಮೂರ್ತಿ ಸರ್ ಗೆ ಹಾಸನಕ್ಕೋ , ಮೈಸೂರ್ ಗೋ ವರ್ಗ ಆಯಿತು.   ಅವರು ಹೋಗುವಾಗ ಕಣ್ಣಿರು ಸುರಿಸುತ್ತ ನನ್ನನ್ನು ಮುದ್ದಾಡಿ ಹೋದರು.      ಆಗ ಫೋನ್ ಇಲ್ಲ ಸರ್ ನನಗೆ ಕಾಗದ ಬರೆಯಲು  ಹೇಳಿ ಕೊಟ್ಟಿದ್ದರು ಅವರ ಅಡ್ರೆಸ್ ಕೂಡ  ಕೊಟ್ಟಿದ್ದರು.   ನಾನು ನನ್ನ  ಅಣ್ಣ ಇಬ್ಬರು ಒಂದೇ  ಕಾರ್ಡಿನಲ್ಲಿ ಬರೆದು ಕಳುಹಿಸುತ್ತಿದ್ದೆವು ಅವರು  ನಮ್ಮ ಕಾಗದಕ್ಕೆ ಉತ್ತರಿಸುತ್ತಿದ್ದರು.    ನಾನು  ಹತ್ತನೇ ತರಗತಿಯಲ್ಲಿ     ಫಸ್ಟ್ ಕ್ಲಾಸಿನಲ್ಲಿ  ಪಾಸಾದ ವಿಷಯ ತಿಳಿಸಿದಾಗ  ತುಂಬಾ ಆನಂದ ಪಟ್ಟು  ನನಗೆ ಒಂದು  ಪಾರ್ಕರ್ ಪೆನ್ ಕೊಡಿಸಿದ್ದರು.  ಅದು ನನ್ಬಳಿ  ಈಗಲೂ ಇದೆ.       ಈಗ ಅವರಿಲ್ಲ  ಅವರ ನೆನಪು ನನ್ನಲ್ಲಿ ಹಚ್ಚ ಹಸಿರಾಗಿದೆ.   ನನ್ನಮ್ಮ ಯಾವಾಗಲೂ ಹೇಳುತ್ತಿದ್ದರು ಅದ್ಯಾವ ಜನ್ಮದ ಋಣಾನು ಬಂಧವೋ ಎಂದು !!! ನಿಮ್ಮದು ಗುರು-ಶಿಷ್ಯರ ಸಂಭಂದ ಅಲ್ಲಾ  ;  ತಂದೆ - ಮಗಳ ಸಂಬಂದ ಎಂದು .  ಆದರೆ ಈಗಿನ ದಿನಗಳಲ್ಲಿ  ಗುರು-ಶಿಷ್ಯಳ ಮೇಲೆ ಅತ್ಯಾಚಾರ ಎಸಗುವ ಘಟನೆಗಳು ಟಿ ವಿ ಯಲ್ಲ್ಲಿ ಪ್ರಸಾರ  ಆದಾಗ ಎಷ್ಟೊಂದು  ವೇದನೆ ಯಾಗುತ್ತದೆ .   ನಿಮಗೆ ಶಿರ ಸಾಷ್ಟಾಂಗ ವಂದನೆಗಳು ಸರ್ ಮತ್ತೆ ಹುಟ್ಟಿ ಬನ್ನಿ